ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೋವಿಡ್-19 ಮಾರ್ಗದರ್ಶನದಂತೆ ಜ.31ರಿಂದ ಫೆ.3ರವೆಗೆ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪಾಲಿಕೆ ವ್ಯಾಪ್ತಿಯ 198 ವಾರ್ಡ್ ಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಹಾಕಲು ಪಾಲಿಕೆ ಆರೋಗ್ಯ ಇಲಾಖೆಯು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ರಾಷ್ಟ್ರೀಯ ಪಲ್ಸ್ ಪೋಲಿಯೋ-2021 ಕಾರ್ಯಕ್ರಮವನ್ನು ಬಿಬಿಎಂಪಿಯ 140 ಯೋಜನಾ ಘಟಕಗಳ, 198 ವಾರ್ಡ್ ಗಳಲ್ಲಿ ಲಸಿಕೆ ಹಾಕಲು ಯೋಜನೆ ರೂಪಿಸಿಕೊಳ್ಳಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,04,45,633 ಜನಸಂಖ್ಯೆ ಇದ್ದು, ಒಟ್ಟು 28,38,822 ಮನೆಗಳಿವೆ. ಈ ಪೈಕಿ 0-5 ವರ್ಷದ 10,84,392 ಮಕ್ಕಳಿದ್ದಾರೆ. 960 ಕೊಳಚೆ ಪ್ರದೇಶಗಳಲ್ಲಿ 3,60,712 ಮಕ್ಕಳಿದ್ದಾರೆ. 3,995 ವಲಸೆ ಜನಾಂಗದ ಪ್ರದೇಶಗಳಲ್ಲಿ 1,97,565 ಜನಸಂಖ್ಯೆಯಿದ್ದು, 18,507 5 ವರ್ಷದೊಳಗಿನ ಮಕ್ಕಳಿದ್ದಾರೆ.
ಪಲ್ಸ್ ಪೋಲಿಯೋ ಲಸಿಕೆ ಹಾಕಲು ಪಾಲಿಕೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಕುಟುಂಬ ಕಲ್ಯಾಣ ಕೇಂದ್ರ, ಔಷಧಾಲಯಗಳು, ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರ, ಶಾಲೆಗಳು, ಸ್ಥಿರ ಮತ್ತು ಸಂಚಾರಿ ತಂಡಗಳನ್ನು ಬಸ್ ನಿಲ್ದಾಣ, ರೈಲ್ವೆ ಮತ್ತು ಮೆಟ್ರೊ ನಿಲ್ದಾಣ, ಮಾಲ್‌ಗಳು, ಸ್ವಯಂ ಸೇವಾ ಸಂಸ್ಥೆಯ ಆಸ್ಪತ್ರೆಗಳು, ಖಾಸಗಿ ನರ್ಸಿಂಗ್ ಹೋಮ್‌ಗಳು, ವೈದ್ಯಕೀಯ ಮಹಾವಿದ್ಯಾಲಯ, ಪ್ರಮುಖ ಉದ್ಯಾನವನಗಳು, ಕೊಳಚೆ ಪ್ರದೇಶಗಳು ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಪೋಲಿಯೋ ಲಸಿಕೆ ಹಾಕಲಾಗುತ್ತದೆ.
ಪೋಲಿಯೋ ಲಸಿಕೆ ಹಾಕಲು 3,340 ಬೂತ್‌ಗಳು, 456 ಸ್ಥಿರ ತಂಡಗಳು, 324 ಸಂಚಾರಿ ತಂಡಗಳು, 14,922 ಲಸಿಕಾ ಕಾರ್ಯಕರ್ತರು ಹಾಗೂ 426 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.