ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರೈತರು ಎರಡು ತಿಂಗಳಿನಿಂದ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆದರೂ ಪ್ರಧಾನಿ ಮೋದಿ ಅವರು ಏನೂ ನಡೆದಿಲ್ಲ ಎಂಬಂತೆ ಪ್ರಸನ್ನವದನರಾಗಿದ್ದಾರೆ. ಹೊಸ ಕೃಷಿ ಕಾಯಿದೆಗಳು ರೈತರ ಪರ ಎಂದು ರಾಷ್ಟ್ರಪತಿಯವರ ಮೂಲಕ ಕೇಂದ್ರ ಸರ್ಕಾರ ಸುಳ್ಳು ಹೇಳಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಕೃಷಿ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ನಗರದಲ್ಲಿ”ಸಂಘರ್ಷದ ಸಂಕಲ್ಪ ದಿನ” ಹೆಸರಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿ, ಅವರ ಹೋರಾಟಕ್ಕೆ ಬೆಂಬಲಿಸಿ ಮಾತನಾಡಿದರು.
ಇಂದು ಕೃಷಿ ವಿರೋಧಿ ಕಾನೂನುಗಳನ್ನು ವಿರೋಧಿಸಿ ಹೋರಾಡುತ್ತಿರುವ ರೈತರ ಮೇಲೆ ಕೇಂದ್ರ ಸರ್ಕಾರ ದೌರ್ಜನ್ಯ ನಡೆಸುತ್ತಿದೆ. ಇದು ಹಿಂಸೆಯನ್ನು ಅಹಿಂಸೆಯ ಮೂಲಕ ಹೋರಾಡಿ ಗೆದ್ದ ಮಹಾತ್ಮ ಗಾಂಧೀಜಿ ಅವರಿಗೆ ತೋರುವ ಅಗೌರವ ಎಂದರು.
ಇಂದಿನ ಭಾರತದಲ್ಲಿ ಅತ್ಯಂತ ಶೋಷಿತ ಸಮುದಾಯಗಳಾದ ರೈತರು, ಕಾರ್ಮಿಕರು, ಮಹಿಳೆಯರು, ದಲಿತರು ಮಾತ್ರವಲ್ಲ ಈ ದೇಶದ ಯಾವ ಸಾಮಾನ್ಯ ಮನುಷ್ಯ ಕೂಡಾ ಸುರಕ್ಷಿತವಾಗಿಲ್ಲ. ಈ ಅನ್ಯಾಯ, ಶೋಷಣೆ, ಅವಮಾನದ ವಿರುದ್ಧ ನಾವು ದನಿ ಎತ್ತದೆ ಹೋದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟದ ಮೂಲಕ ಬ್ರಿಟಿಷರ ಗುಲಾಮಗಿರಿಯಿಂದ ನಮ್ಮನ್ನು ಬಿಡುಗಡೆಗೊಳಿಸಿ, ಗಾಂಧೀಜಿಯವರು ನಮಗೆ ರಾಜಕೀಯ ಸ್ವಾತಂತ್ರ್ಯವನ್ನು ಗಳಿಸಿಕೊಟ್ಟರು. ಈಗ ನಾವು ನವವಸಾಹತುಷಾಹಿಗಳ ವಿರುದ್ಧ ಹೋರಾಡಿ ಸಾಮಾಜಿಕ ಸ್ವಾತಂತ್ರ್ಯವನ್ನು ಗಳಿಸಲು ಇನ್ನೊಂದು ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿದೆ ಎಂದರು.