ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದಾಗಿ ಆತನ ಪರ ವಕೀಲರು ಜಾಮೀನು ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ಪಡೆದಿರುವ ಐಎಂಎ ವಂಚನೆಯ ಪ್ರಮುಖ ಆರೋಪಿ ಮನ್ಸೂರ್ ಖಾನ್ ಇದೇ ಫೆಬ್ರವರಿ 12 ರಂದು ಜೈಲಿನಿಂದ ಬಿಡುಗಡೆಯಾಗಲಿದ್ದಾನೆ.
ಅನಾರೋಗ್ಯದಿಂದ ಬಳಲುತ್ತಿರುವ ಮನ್ಸೂರ್ ಖಾನ್ ಜಾಮೀನು ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೃದಯ ಸಂಬಂಧಿ ಕಾಯಿಲೆಯಿಂದ ಈತ ಬಳಲುತ್ತಿದ್ದು, ಈಗಾಗಲೇ ಹಲವು ಪ್ರಕರಣದಲ್ಲಿ ಜಾಮೀನು ದೊರೆತಿದೆ. ಇದನ್ನು ಪರಿಗಣಿಸಿ ಬಾಕಿ ಉಳಿದಿರುವ ನಾಲ್ಕು ಹಾಗೂ ಕೊನೆ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವಂತೆ ಖಾನ್ ಪರ ವಕೀಲರು ಮನವಿ ಮಾಡಿದ್ದರು.
ಇದಕ್ಕೆ ಸಿಬಿಐ ವಿಶೇಷ ಅಭಿಯೋಜಕ ಪ್ರಸನ್ನಕುಮಾರ್ ಆಕ್ಷೇಪಣೆ ಸಲ್ಲಿಸಿದ್ದರು. ಏಪ್ರಿಲ್ ವರೆಗೂ ಜಾಮೀನು ನೀಡದಂತೆ ಮನವಿ ಮಾಡಿದ್ದರು. ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಅಧಿಕಾರಿಗಳು ದಾಖಲಿಸಿದ್ದ ಇತರ ಪ್ರಕರಣಗಳಲ್ಲಿ ಮನ್ಸೂರ್ ಖಾನ್‌ಗೆ ಜಮೀನು ಸಿಕ್ಕಿತ್ತು. ಇದನ್ನು ಪರಿಗಣಿಸಿ ಹೈಕೋರ್ಟ್ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರು ಮನ್ಸೂರ್ ಖಾನ್ ಗೆ ನಾಲ್ಕನೇ ಪ್ರಕರಣ ಹಾಗೂ ಕೊನೆ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಿ ಆದೇಶ ನೀಡಿದ್ದಾರೆ.
ನ್ಯಾಯಾಲಯದ ನಿರ್ದೇಶನ ಮೇರೆಗೆ ಮನ್ಸೂರ್ ಖಾನ್ ಇದ್ದ ಜೈಲಿನ ಬ್ಯಾರಕ್ ಗೂ ಬಿಗಿ ಭದ್ರತೆ ಕಲ್ಪಿಸಲಾಗಿತ್ತು ಇದೀಗ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ಸಿಕ್ಕಿದ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿ ಮಹಮದ್ ಮನ್ಸೂರ್ ಖಾನ್ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾನೆ.
ಆದರೆ, ಹೈಕೋರ್ಟ್ ವಿಧಿಸಿರುವ ಎಲ್ಲಾ ಷರತ್ತುಗಳನ್ನು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಪೂರೈಸಿದ ಬಳಿಕ ಬಿಡುಗಡೆ ಆದೇಶ ವನ್ನು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಸಲ್ಲಿಸಬೇಕು. ಈ ಪ್ರಕ್ರಿಯೆ ಮುಗಿದ ಕೂಡಲೇ ಬಿಡುಗಡೆ ಮಾಡಲಾಗುವುದು ಎಂದು ಕಾರಾಗೃಹ ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ.
ಇನ್ನು ಐಎಂಎ ವಂಚನೆಗೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದಾಖಲಿಸಿದ್ದ ಪ್ರಕರಣ ಹಾಗೂ ಸಿಬಿಐ ದಾಖಲಿಸಿದ್ದ ಇತರ ಮೂರು ಪ್ರಕರಣಗಳಲ್ಲಿ ಮನ್ಸೂರ್ ಖಾನ್ ಗೆ ಹೈಕೋರ್ಟ್ ಜಾಮೀನು ನೀಡಿತ್ತು. ಮನ್ಸೂರ್ ಖಾನ್ 2019 ಆಗಸ್ಟ್ ನಲ್ಲಿ ಬಂಧನಕ್ಕೆ ಒಳಗಾದ ಬಳಿಕ ಅನಾರೋಗ್ಯದ ಕಾರಣ ನೀಡಿದ್ದ. ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದ.