ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ: ದೇಶಾದ್ಯಂತ ಧರ್ಮ ಹಾಗೂ ಸಂಸ್ಕೃತಿಯ ಹೆಸರಿನಲ್ಲಿ ಮಹಿಳಾ ಸ್ವಾತಂತ್ರ್ಯವನ್ನೇ ಹರಣಗೊಳಿಸಿ, ಜಾತಿಯತೆ ದೌರ್ಜನ್ಯವನ್ನು ನೇರವಾಗಿ ವಿರೋಧಿಸುತ್ತಿದ್ದ ಪ್ರೊ.ಕೆ.ಎಸ್.ಭಗವಾನ್ ಅವರ ಮೇಲೆ ವಕೀಲೆಯೊಬ್ಬರು ಮಸಿ ಬಳಿದಿರುವುದು ಅಕ್ಷಮ್ಯ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಉಮಾಮಹದೇವ ಆರೋಪಿಸಿದರು.
ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಕಬಿನಿ ಅತಿಥಿ ಗೃಹದಲ್ಲಿ ನಡೆದ ದಸಂಸ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿ, ಧಾರ್ಮಿಕವಾಗಿ ಕಸಿದುಕೊಂಡಿದ್ದ ಮಹಿಳಾ ಸ್ವಾತಂತ್ರ್ಯದ ವಿರುದ್ಧ ಧ್ವನಿಯಾಗಿದ್ದ ಭಗವಾನರ ಮೇಲೆ ದಾಳಿ ನಡೆಸಿ, ಮಸಿ ಬಳಿದ ಮೀರಾ ರಾಘವೇಂದ್ರ ಅವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದರು.
ಇನ್ನು ರಾಜ್ಯದ ಆಡಳಿತರೂಢ ಬಿಜೆಪಿ ಸರ್ಕಾರ ವಾಮ ಮಾರ್ಗದ ಮೂಲಕ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿರಯವುದು ಅನೈತಿಕ ಕ್ರಮವಾಗಿದೆ. ಜನ ಸಮುದಾಯದ ಆಹಾರ ಪದ್ಧತಿಯನ್ನು ನಿರ್ಬಂಧಿಸುವ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರಗತಿಪರ ಚಿಂತನೆ ಮತ್ತು ವಾಕ್ ಸ್ವಾತಂತ್ರ್ಯವನ್ನು ಕಸಿಯಲು ಷಡ್ಯಂತ್ರ ನಡೆಸುತ್ತಿರುವ ಮನುವಾದಿ ವ್ಯವಸ್ಥೆ ಮೀರಾ ಅಂತಹವರನ್ನು ಮುಂದೆ ಬಿಟ್ಟು ಸಾಹಿತಿಗಳ ಮುಖಕ್ಕೆ ಮಸಿ ಬಳಿಸುವ ಕೃತ್ಯವನ್ನು ನಡೆಸುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ದಿನಗಳಲ್ಲಿ ಜನ ವಿರೋಧಿ ಆಡಳಿತವನ್ನು ನಡೆಸುತ್ತಿದೆ. ಗೋ ಹತ್ಯೆ ಕಾಯ್ದೆಯಂತೆಯೇ ರೈತ ವಿರೋಧಿ ಕಾಯ್ದೆಗಳು ಕೂಡ ದೇಶದ ಸಾಮಾನ್ಯ ಜನರಿಗೆ ಮಾರಕವಾಗಿವೆ. ಈ ಹಿನ್ನೆಲೆಯಲ್ಲಿ ಜನ ವಿರೋಧಿ ಕಾಯ್ದೆಯನ್ನು ಸರ್ಕಾರಗಳು ಕೂಡಲೇ ಹಿಂಪಡೆಯಬೇಕು. ಕಾನೂನು ಕೈಗೆತ್ತಿಕೊಂಡಿರುವ ವಕೀಲೆ ಮೀರಾ ರಾಘವೇಂದ್ರ ಅವರನ್ನು ಬಂಧಿಸಬೇಕು. ತಪ್ಪಿದ್ದಲ್ಲಿ ದಸಂಸದ ವತಿಯಿಂದ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮತ್ತೊಬ್ಬ ಜಿಲ್ಲಾ ಸಂಘಟನಾ ಸಂಚಾಲಕ ಯಡದೊರೆ ಮಹದೇವಯ್ಯ ಮಾತನಾಡಿ, ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ಮೀರಾ ಅವರ ಕೃತ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕಾನೂನಿನಡಿ ಶಿಕ್ಷೆಯನ್ನು ನೀಡುವ ಮೂಲಕ ಕೋಮುವಾದವನ್ನು ಹರಡುವ ಕೆಲಸಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ತಾಲೂಕು ಸಂಚಾಲಕ ಎಂ.ಸಿದ್ದರಾಜು, ಸಂಘಟನಾ ಸಂಚಾಲಕರಾದ ಹಿರಿಯೂರು ರಾಜೇಶ್, ಚಂದಹಳ್ಳಿ ಮಲ್ಲೇಶ್, ಕುರಿಸಿದ್ದನಹುಂಡಿ ರಾಜು, ಇಂಡವಾಳು ಮಾದೇಶ್, ಮುಖಂಡರಾದ ಚಲುವಯ್ಯ, ದೊಡ್ಡಯ್ಯ, ಕೇತುಪುರ ರವೀಂದ್ರ, ಕೋಳಿಮಲ್ಲನಹುಂಡಿ ಪುಟ್ಟರಾಜು ಹಾಗೂ ಇತರರು ಉಪಸ್ಥಿತರಿದ್ದರು.