ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಕೊರೊನಾ ಕಾಲದಲ್ಲಿ ನಾವು ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದ್ದೇವೆ. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮತ್ತು ರೈತರ ಬದುಕು ಹಸನಾಗಲು ಈ ಕಾನೂನುಗಳು ಬಹಳ ಅವಶ್ಯಕ ಮತ್ತು ಅಗತ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಇಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಮಾತನಾಡಿದ ಅವರು, ರಾಷ್ಟ್ರಪತಿಗಳ ಭಾಷಣ ಭಾರತದ ಸಂಕಲ್ಪ ಶಕ್ತಿಯನ್ನು ಪ್ರದರ್ಶಿಸಿದೆ. ಅವರ ಮಾತುಗಳು ಇಡೀ ದೇಶದ ಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ ಎಂದರು.
ನಮ್ಮದು ವಿವಿಧತೆಯಿಂದ ತುಂಬಿರುವ ದೇಶ. ಸಾವಿರಾರು ಭಾಷೆ-ಸಂಸ್ಕೃತಿ ಗಳಿರುವ ದೇಶ ನಮ್ಮದು. ಇವೆಲ್ಲದರ ನಡುವೆಯೂ ಒಂದು ದೇಶ- ಒಂದು ಗುರಿ ಎಂಬುದನ್ನು ಸಾಧಿಸಿ ತೋರಿಸಿದ್ದೇವೆ. ಕೊರೊನಾ ವೇಳೆ ಭಾರತ ತನ್ನನ್ನು ತಾನು ಸಂಭಾಳಿಸಿಕೊಂಡು ಇದರ ಜೊತೆಗೆ ವಿಶ್ವಕ್ಕೂ ನೆರವಾಯಿತು. ಸರ್ವೇ ಜನ ಸುಖಿನೋ ಭವಂತು ಸರ್ವೇ ಸಂತು ನಿರಾಮಯ ಎಂಬುದನ್ನು ಕೊರೊನಾ ಕಾಲದಲ್ಲಿ ಭಾರತ ನಿರೂಪಿಸಿದೆ ಎಂದರು.
ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಇದೆ ಭಾರತ ಬಡವರಿಗೆ ನೆರವಾಯಿತು. ಎಂಟು ತಿಂಗಳು ಪಡಿತರ ನೀಡಿತು. ಜನಧನ್ ಮೂಲಕ ಆರ್ಥಿಕ ನೆರವು ವಿಸ್ತರಿಸಿದೆವು. ಸಂಕಷ್ಟ ಸಂದರ್ಭದಲ್ಲಿ ನೆರವಿಗೆ ಬಂತು. ಕೆಲವರು ಆದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು ಎಂದು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡ ಪ್ರಧಾನಿ, ಧರಣಿ ನಿರತ ರೈತರ ಜೊತೆಗೆ ಚರ್ಚೆಗೆ ನಾವು ಸಿದ್ಧ ಕೃಷಿ ಕಾಯ್ದೆಯಿಂದ ತೊಂದರೆ ಇದ್ದರೆ ಬದಲಾವಣೆಗಳ ಬಗ್ಗೆ ಬದಲಾವಣೆ ಮಾಡಲು ನಾವು ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕೃಷಿ ಕಾಯ್ದೆ ಜಾರಿಯಾದ ಬಳಿಕ ಮಂಡಿ ಬಂದ್ ಆಗಿಲ್ಲ. ಕನಿಷ್ಠ ಬೆಂಬಲ ಬೆಲೆಯೂ ರದ್ದಾಗಿಲ್ಲ. ಕೃಷಿಗೆ ಬೆಂಬಲ ಬೆಲೆ ಹೆಚ್ಚಾಗಿದೆ. ನಿಮಗೆ ಕಾಯ್ದೆ ಬಗ್ಗೆ ತಕರಾರು ಏನಿದೆ ಎಂಬುದನ್ನು ಹೇಳಿದರೆ ನಾವು ತಿದ್ದುಪಡಿ ಮಾಡುತ್ತೇವೆ ಎಂದು ಹೇಳಿದರು.
ಕೊರೊನಾ ಸೇನಾನಿಗಳು ದೇವರ ಪ್ರತಿರೂಪ ಯಾರೂ ಕೂಡ ರೋಗಿಗಳ ಹತ್ತಿರಕ್ಕೆ ತೆರಳದಿದ್ದ ಪರಿಸ್ಥಿತಿಯಲ್ಲಿ ನಮ್ಮ ನೈರ್ಮಲ್ಯ ಸೇನಾನಿಗಳು ಅವರ ಆರೈಕೆಯಲ್ಲಿ ತೊಡಗಿದ್ದರು. ಕೊರೊನಾ ವಿರುದ್ಧ ಗೆಲ್ಲಲು ನೆರವಾದರು. ಅವರ ಪಾಲಿಗೆ ಜೀವನ್ಮರಣ ಹೋರಾಟವಾಗಿತ್ತು. ಅವರು ದೇವರ ರೂಒದಲ್ಲಿ ಬಂದಿದ್ದಾರೆ ಎಂದು ಕೊಂಡಾಡಿದರು.
ದೇವರ ದಯೆಯಿಂದ ನಾವು ಕೊರೊನಾದಿಂದ ಪಾರಾಗಿದ್ದಾರೆ ಎಂದು ಮನೀಶ್ ತಿವಾರಿ ತಿಳಿಸಿದರು. ಆದರೆ ನಾನು ಏನನ್ನು ಹೇಳಲು ಬಯಸುತ್ತೇನೆ ಎಂದರೆ, ಇಡೀ ಜಗತ್ತೇ ಕೊರೊನಾದಿಂದ ನಡುಗಿದಾಗ ಭಾರತ ಸುರಕ್ಷಿತವಾಗಿತ್ತು. ವೈದ್ಯರು ದಾದಿಯರು ದೇವರ ಪ್ರತಿರೂಪ ದಲ್ಲಿ ಬಂದ ಕಾರಣ ನಾವೆಲ್ಲರೂ ಸುರಕ್ಷಿತವಾಗಿದ್ದವು. ಅವರಿಗೆ ಅನೇಕ ದಿನಗಳವರೆಗೆ ಮನೆಗಳಿಗೆ ಹಿಂದಿರುಗಲು ಸಾಧ್ಯವಾಗಿರಲಿಲ್ಲ ಎಂದು ಮೆಲುಕುಹಾಕಿದರು.