ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಶತಮಾನದಷ್ಟು ಹಳೆಯದಾದ ಮೈಸೂರಿನ ಮಹಾರಾಜ ಕಾಲೇಜಿನ ಮೇಲ್ಛಾವಣಿ ಕುಸಿದುಬಿದ್ದ ಪರಿಣಾಮ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಂದು ಬೆಳಗ್ಗೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ ಈ ದುರಂತ ಸಂಭವಿಸಿದ್ದು, ವಿಶಾಲ್, ಯಶ್ವಂತ್ ಹಾಗೂ ಸಲೀಂ ಗಾಯ ಗೊಂಡವರು ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಈ ವಿದ್ಯಾರ್ಥಿಗಳ ತಲೆ ಹಾಗೂ ಮುಖಕ್ಕೆ ಪೆಟ್ಟು ಬಿದ್ದಿದ್ದು, ಗಾಯಾಳು ವಿದ್ಯಾರ್ಥಿಗಳನ್ನು ಕಾಮಾಕ್ಷಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬ ವಿದ್ಯಾರ್ಥಿಯ ತಲೆಗೆ ಗಂಭೀರ ಪೆಟ್ಟುಬಿದ್ದಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಆರ್. ಶಿವಪ್ಪ, ಕಾಲೇಜಿನ ಪ್ರಾಂಶುಪಾಲರಾದ ಅನಿತಾ ಹಾಗೂ ಉಪನ್ಯಾಸಕರು ಆಸ್ಪತ್ರೆಗೆ ಧಾವಿಸಿದ್ದು ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.
ಕಾಲೇಜು ಕಟ್ಟಡದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಇದರಿಂದ ಏಕಾಏಕಿ ಛಾವಣಿ ಗಾರೆ ಕಳಚಿಬಿದ್ದಿದೆ. ಹಳೆಯ ಕಟ್ಟಡ ಇದಾಗಿದ್ದು, ಬೇರೆ ಕಡೆ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಅಷ್ರಲ್ಲೇ ಈ ದುರಂತ ಸಂಭವಿಸಿದೆ ಎಂದು ಪ್ರಾಂಶುಪಾಲರಾದ ಅನಿತಾ ತಿಳಿಸಿದ್ದಾರೆ.
ಗಾಯಾಳು ವಿದ್ಯಾರ್ಥಿಗಳಿಗೆ ಕಾಲೇಜು ವತಿಯಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಾವುದೇ ತೊಂದರೆ ಇಲ್ಲ. ವಿದ್ಯಾರ್ಥಿಗಳ ಪೋಷಕರು ಕೂಡ ಬಂದಿದ್ದಾರೆ. ನಮ್ಮ ಸಿಬ್ಬಂದಿ ಕೂಡ ಆಸ್ಪತ್ರೆಯಲ್ಲಿದ್ದು ಕಾಳಜಿ ವಹಿಸುತ್ತಿದ್ದಾರೆ ಎಂದು ಪ್ರೊ. ಶಿವಪ್ಪ ಎಂದು ತಿಳಿಸಿದ್ದಾರೆ.