ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ರೈತ ವಿರೋಧಿ ಕರಾಳ ಶಾಸನಗಳನ್ನು ವಿರೋಧಿಸಿ ಮಳೆ, ಚಳಿ ಎನ್ನದೇ ಕಳೆದ 90 ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ಕಿಂಚಿತ್ತೂ ಗಮನ ಕೊಡದ ಕೇಂದ್ರ ಬಿಜೆಪಿ ಸರ್ಕಾರದಂತಹ ಹೃದಯ ಹೀನ ಸರ್ಕಾರವನ್ನು ಈ ದೇಶ ಹಿಂದೆಂದೂ ಕಂಡಿರಲಿಲ್ಲ ಎಂದು ರಾಜ್ಯ ಎಎಪಿ ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟ, ಜನ ವಿರೋಧಿ, ಹೃದಯ ಹೀನ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಲು ಫೆಬ್ರವರಿ 18ರಂದು (ನಾಳೆ) ನಡೆಯುತ್ತಿರುವ ರೈಲು ತಡೆ ಹೋರಾಟವನ್ನು ಆಮ್ ಆದ್ಮಿ ಪಕ್ಷ ಸಂಪೂರ್ಣವಾಗಿ ಬೆಂಬಲಿಸಿದೆ. ಕರ್ನಾಟಕದ ಎಲ್ಲಾ ತಾಲೂಕು, ಜಿಲ್ಲಾ ಕೇಂದ್ರಗಳು ಸೇರಿದಂತೆ ಪ್ರಮುಖ ರೈಲು ನಿಲ್ದಾಣಗಳಲ್ಲಿ ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಜಮಾಯಿಸಿ ಕೇಂದ್ರ ಸರ್ಕಾರಕ್ಕೆ ಸ್ಪಷ್ಟ ಸಂದೇಶ ನೀಡಲಿದ್ದಾರೆ ಎಂದು ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ತಿಳಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೆ ಇವೆ. ಕೊರೊನಾ ಸಂಕಷ್ಟದಿಂದ ಚೇತರಿಸಿಕೊಳ್ಳುತ್ತಿದ್ದ ಜನತೆಗೆ ಸರ್ಕಾರ ಬರೆ ಹಾಕುತ್ತಿದೆ. ದೇಶದ ಸಾರ್ವಜನಿಕ ಆಸ್ತಿಗಳನ್ನು ಒಂದೊಂದೆ ಮಾರಾಟ ಮಾಡುತ್ತಾ ಖಾಸಗಿಯವರ ಕೈಗೆ ದೇಶವನ್ನು ನೀಡಲು ಹೊರಟಿದೆ, ಇಂತಹ ಕೆಟ್ಟ ಸರ್ಕಾರ ನಿಜಕ್ಕೂ ನಮ್ಮ ಭವ್ಯ ಭಾರತದ ಭವಿಷ್ಯಕ್ಕೆ ಮಾರಕ. ಆದ ಕಾರಣ ಈ ಹೋರಾಟಕ್ಕೆ ಆಮ್ ಆದ್ಮಿ ಪಕ್ಷದ ಬೆಂಬಲ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ಎಲ್ಲಾ ತಾಲೂಕು, ಜಿಲ್ಲಾ ಘಟಕದ ಸದಸ್ಯರು, ಮುಖಂಡರು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಈ ದೇಶದ ಅನ್ನದಾತ, ಸಾರ್ವಭೌಮದ ಉಳಿವಿಗೆ ಕೈ ಜೋಡಿಸಲಿದ್ದಾರೆ ಎಂದಿದ್ದಾರೆ.