ವಿಜಯಪಥ ಸಮಗ್ರ ಸುದ್ದಿ
ಹಾವೇರಿ: ಕಂದಾಯ ಇಲಾಖೆಗೆ ಸೀಮಿತವಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳನ್ನು ಆಹ್ವಾನಿಸಿ ಗ್ರಾಮದ ಜನತೆಯ ಸಮಸ್ಯೆಗಳ ನಿವಾರಣೆಗೆ ಕ್ರಮವಹಿಸಲಾಗಿದೆ. ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.
ಗ್ರಾಮ ವಾಸ್ತವ್ಯ ಮಾಡಿದ ಸವಣೂರು ತಾಲೂಕು ಹೊಸನೀರಲಗಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೃದ್ಧಾಪ್ಯವೇತನ, ವಿಧವಾ ವೇತನ ಸೇರಿದಂತೆ ಹಲವು ಮನವಿಗಳನ್ನು ಸ್ವೀಕರಿಸಲಾಗಿದೆ. ಈ ದಿನವೇ ಇವರಿಗೆ ಮಂಜೂರಾತಿಪತ್ರ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಮದ ಜನರ ಆರೋಗ್ಯದ ಸ್ಥಿತಿಗತಿ ಅರಿಯಲು ಹೆಲ್ತ್ ಪ್ರೋಫಿಲ್ ತಯಾರಿಸಲಾಗಿದೆ. ವೈಜ್ಞಾನಿಕವಾಗಿ ಎಲ್ಲರ ಆರೋಗ್ಯದ ವಿಷ್ಲೇಷಣೆಮಾಡಿ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲಾಗುವುದು. ಗ್ರಾಮ ವಾಸ್ತವ್ಯದ ಅಂಗವಾಗಿ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದರು.
ಮಕ್ಕಳು, ತಾಯಂದಿರ ಅಪೌಷ್ಠಿಕ ಕುರಿತಂತೆ ತಪಾಸಣೆ ನಡೆಸಲಾಗಿದೆ. ಒಂದೊಮ್ಮೆ ಅಪೌಷ್ಠಿಕತೆಯಿಂದ ಬಳಲುವ ಮಕ್ಕಳಿಗೆ ನ್ಯೂಟ್ರೇಷನ್ ರಿ ಹ್ಯಾಬ್ಲಿಟೇಷನ್ ಕೇಂದ್ರದಲ್ಲಿ ದಾಖಲಿಸಿ ಅಪೌಷ್ಠಿಕತೆ ನಿವಾರಣೆಗೆ ಕ್ರಮವಹಿಸಲಾಗುವುದು ಎಂದು ಹೇಳಿದರು.
ಗ್ರಾಮದಲ್ಲಿರುವ ಕುಡಿಯುವ ನೀರಿನ ಹಳೆಯ ಟ್ಯಾಂಕರ್ ಶಿಥಿಲಗೊಂಡಿದ್ದು, ಹೊಸ ಟ್ಯಾಂಕ್ ನಿರ್ಮಾಣಕ್ಕೆ ಗ್ರಾಮಸ್ಥರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜಲಜೀವನ ಯೋಜನೆಯಡಿ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. 22 ಜನರಿಗೆ ವಯಕ್ತಿಕ ಶೌಚಾಲಯ ನಿರ್ಮಾಣ ಮಂಜೂರಾತಿ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ನಿವಾರಿಸಿ ಸೋಮವಾರದಿಂದಲೇ ವಿದ್ಯಾರ್ಥಿಗಳ ಸಮಯಕ್ಕೆ ಬಸ್ ಓಡಿಸಲು ಸೂಚನೆ ನೀಡಲಾಗಿದೆ. ಗ್ರಂಥಾಲಯ ಬೇಡಿಕೆಯನ್ನು ಈಡೇರಿಸಲಾಗಿದೆ. ಶಾಲಾ ಕೊಠಡಿಯೊಂದಲ್ಲಿ ತಾತ್ಕಾಲಿಕವಾಗಿ ಗ್ರಂಥಾಲಯ ಆರಂಭಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪರಿಶಿಷ್ಟರ ಬೇಡಿಕೆಯಂತೆ ಸ್ಮಶಾನ ಭೂಮಿ, ರಸ್ತೆ ಮತ್ತು ಚರಂಡಿ ನಿರ್ಮಾರ್ಣ, ದೇವಸ್ಥಾನದ ಬೇಡಿಕೆಗಳ ಈಡೇರಿಕೆಗ ಕ್ರಮವಹಿಸಲಾಹುವುದು ಎಂದು ಹೇಳಿದರು.
ನಿವೇಶನ ಮತ್ತು ಮನೆಗಳ ನಿರ್ಮಾಣಕ್ಕೆ ಪಟ್ಟಾ ನೀಡಿಕೆ ಕುರಿತಂತೆ ಸಮಸ್ಯೆ ಪರಿಹರಿಸಲು 15 ದಿವಸದ ಗಡುವು ನೀಡಲಾಗಿದೆ. 60 ಮನೆಗಳಿಗೆ ಪಟ್ಟಾ ಕೊಡಲು ಕ್ರಮವಹಿಸಲಾಗುವುದು. ಬೆಂಕಿ ಅವಘಡದಿಂದ ಭೂ ದಾಖಲೆಗಳು ¸ಸವಣೂರ ಕಂದಾಯ ಕಚೇರಿಯಲ್ಲಿ ಸುಟ್ಟುಹೋಗಿವೆ. 2011ರ ಸಂದರ್ಭದಲ್ಲಿ ಈ ದಾಖಲೆಗಳು ಸುಟ್ಟು ಹೋಗಿದೆ. ಹಳೆಯ ದಾಖಲೆಗಳು ಸಿಗದಿದ್ದರೆ ಭೂಮಿಗೆ ಸಂಬಂಧಿಸಿದ ಬೇರೆ ಬೇರೆ ದಾಖಲೆಗಳ ಝರಾಕ್ಸ್ ಪ್ರತಿ ನೀಡಿದರೆ ಹೊಸ ಭೂ ದಾಖಲೆಗಳನ್ನು ಸೃಷ್ಟಿಮಾಡಮಾಡಲಾಗುವುದು. ಇಲ್ಲವಾದರೆ ಜಿಲ್ಲಾ ಸಮಿತಿಯಲ್ಲಿ ಈ ಸಮಸ್ಯೆ ನಿವಾರಣೆ ಕುರಿತಂತೆ ಚರ್ಚಿ ಹೊಸ ದಾಖಲೆಗಳ ಸೃಜನೆಗೆ ಕ್ರಮವಹಿಸಲಾಗುವುದು. ಇದರಿಂದ ರೈತರಿಗೆ ಭೂ ಪರಬಾರೆ, ವಿಭಾಗೀಕರಣಕ್ಕೆ ಅನುಕೂಲವಾಗಲಿದೆ ಈ ಸಮಸ್ಯೆಯನ್ನು ಒಂದು ತಿಂಗಳೊಳಗಾಗಿ ಬಗೆಹರಿಸಲು ಕ್ರಮವಹಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್ ಮಾತನಾಡಿ, ಗ್ರಾಮದ ಕುಡಿಯುವ ನೀರು, ರಸ್ತೆ, ಚರಂಡಿ, ಶೌಚಾಲಯ, ನಿವೇಶನ ಮತ್ತು ವಸತಿ ರಹಿತರನ್ನು ಗುರುತಿಸಿ ನಿವೇಶನ ನಿರ್ಮಾಣಕ್ಕೆ ಒಂದರಿಂದ ಎರಡು ತಿಂಗಳೊಳಗಾಗಿ ಪರಿಹಾರ ಕಂಡುಕೊಳ್ಳಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಗ್ರಾಮ ಪಂಚಾಯತಿಗೆ ಹೆಚ್ಚಿನ ಅಧಿಕಾರ ಮತ್ತು ಅನುದಾನ ನೀಡಲಾಗಿದೆ. ಗ್ರಾಮದ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ ಹಾಗೂ ಆರ್ಥಿಕ ಕ್ಷೇತ್ರದ ಅಭಿವೃದ್ಧಿಗೆ ಗ್ರಾಮ ಸಭೆಯಲ್ಲಿ ತೀರ್ಮಾನಕೈಗೊಂಡು ಕ್ರಿಯಾ ಯೋಜನೆ ರೂಪಿಸಿ ಅನುದಾನ ಒದಗಿಸಬೇಕು. ಗ್ರಾಮಸ್ಥರು ಈ ಸಭೆಗಳಲ್ಲಿ ಭಾಗವಹಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯತಿಯಲ್ಲಿ ಜಾಗದ ಹದ್ದುಬಸ್ತು, ಚೆಕ್‍ಬಂದಿ ಕುರಿತು ದೂರುಗಳಿವೆ. ಈ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಉಪವಿಭಾಗಾಧಿಕಾರಿ ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ ಉಪಸ್ಥಿತರಿದ್ದರು.