ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಯುವತಿಯ ಜೊತೆ ಏಕಾಂತದಲ್ಲಿರುವ ವಿಡಿಯೋ, ಆಡಿಯೋ ತುಣುಕುಗಳ ಸಿಡಿ ವಿವಾದದ ಸಂಬಂಧ ರಮೇಶ್ ಜಾರಕಿಹೊಳಿ ಅವರ ತಮ್ಮ (ಸಹೋದರ) ಕೆಎಂಎಫ್ ಅಧ್ಯಕ್ಷರು ಆಗಿರು, ಅರಭಾವಿ ಕ್ಷೇತ್ರದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಮಾತುಕತೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿರುವ ವ್ಯಕ್ತಿ ಯಾರು? ಅದರ ಹಿಂದಿರುವ ಹುಡುಗಿಯಾರು? ಅವರ ಕುಟುಂಬ ಯಾವುದು? ಅವರ ಹಿಂದಿರುವ ಪ್ರಭಾವಿ ರಾಜಕಾರಣಿ ಯಾರು? ಈ ಎಲ್ಲಾ ವಿಷಯಗಳು ಗೊತ್ತಾಗಬೇಕು. ಅದಕ್ಕಾಗಿ ತನಿಖೆಯಾಗಬೇಕು. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ತಮ್ಮ ಸಹೋದರನ ಮೇಲೆ ಬಂದಿರುವ ಆರೋಪ ಇದೊಂದು ನಕಲಿ ಸಿಡಿ ಆಗಿದೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು. ಹೀಗಾಗಿ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.
ಇನ್ನು ಈ ಸಿಡಿ ಬಿಡುಗಡೆಯಿಂದ ಪ್ರಭಾವಿಗಳ ಕೈವಾಡವಿದೆ. ಸಿಡಿ ಬಿಡುಗಡೆ ಮಾಡಿರುವ ವ್ಯಕ್ತಿಯ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಲು ಈಗಾಗಲೇ ವಕೀಲರನ್ನು ಭೇಟಿ ನೀಡಿ ಕಾನೂನು ಕ್ರಮಕ್ಕೆ ಮುಂದಾಗುತ್ತಿವೆ ಎಂದರು.
ಈ ಸಿಡಿಗಳನ್ನು ಗಂಭೀರವಾಗಿ ಪರಿಗಣಿಸಿ ಕೊಂಡು ಹೋದರೆ ರಾಜಕಾರಣ ಮಾಡುವುದು ಕಷ್ಟವಾಗುತ್ತದೆ. ಜಾರಕಿಹೊಳಿ ಕುಟುಂಬದ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಈ ಘಟನೆಯ ಬಗ್ಗೆ ತಿಳಿಯಬೇಕಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದೇನೆ. ಈ ಬಗ್ಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿಯೂ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಬೆಂಗಳೂರಿನಲ್ಲಿದ್ದಾರೆ. ದೆಹಲಿಗೆ ಹೋಗುತ್ತಿಲ್ಲ. ಇನ್ನು ವಿಡಿಯೋಗಳನ್ನು ಯೂಟ್ಯೂಬ್ ವಿದೇಶಗಳಿಂದ ಅಪ್ಲೋಡ್ ಮಾಡಿರುವ ಮಾಹಿತಿಗಳಿವೆ. ಹೀಗಾಗಿ ಸಿಬಿಐ ತನಿಖೆಗೆ ಒತ್ತಾಯ ಮಾಡಿದ್ದೇವೆ. ನಾವು ಸಹ ಕಾನೂನು ಹೋರಾಟ ಮಾಡುತ್ತೇವೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.