ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಜನವಿರೋಧಿ ನೀತಿಗಳ ಬಗ್ಗೆ ಜನಾಭಿಪ್ರಾಯ ರೂಪಿಸಿ ರಾಜ್ಯದಲ್ಲಿ ಪಕ್ಷದ ಬಲವರ್ಧನೆಗೆ ಮುಂದಾಗಿರುವ ಕೆಪಿಸಿಸಿ, ಪಕ್ಷದ ಶಾಸಕರು ಇಲ್ಲದ ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರದಿಂದ ಜನಧ್ವನಿ ಜಾಥಾ ಹಮ್ಮಿಕೊಂಡಿದೆ.
ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯಲ್ಲಿ ಇಂದು ಮೊದಲ ಜಾಥಾ ನಡೆಯಲಿದ್ದು ನಡೆಯುತ್ತಿದ್ದು ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾಣಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗರೆಡ್ಡಿ ಧ್ರುವನಾರಾಯಣ್ ಇತರರು ಇದ್ದರು.
ಬಳಿಕ ವಿಶೇಷ ವಾಹನದಲ್ಲಿ ಕಾಂಗ್ರೆಸ್ ನಾಯಕರು ದೇವನಹಳ್ಳಿಗೆ ಪ್ರಯಾಣ ಬೆಳೆಸಿದರು. ಅಲ್ಲಿ ಮೆರವಣಿಗೆ ಮೂಲಕ ಜನನಿಬಿಡ ಪ್ರದೇಶದಲ್ಲಿ ಸಾಗಿ ರಾಜ್ಯ – ಕೇಂದ್ರ ಸರ್ಕಾರದ ಜನವಿರೋಧಿ ನೀತಿಯ ಕುರಿತು ಮನವರಿಕೆ ಮಾಡಲಿದ್ದಾರೆ. ಮಧ್ಯಾಹ್ನ 3 ಕ್ಕೆ ಚಿಕ್ಕಬಳ್ಳಾಪುರಕ್ಕೆ ತೆರಳಲಿದ್ದಾರೆ.
ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಲು ಡೊಳ್ಳು ಕುಣಿತ ಸೇರಿದಂತೆ ಹಲವು ಜಾನಪದ ಕಲೆಗಳ ಪ್ರದರ್ಶನ ನೀಡಲಾಗುತ್ತಿದೆ. ಜನರನ್ನು ತಮ್ಮತ್ತ ಸೆಳೆಯುವ ಜೊತೆಗೆ ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಲೇಬೇಕೆಂಬ ಪಣತೊಟ್ಟು ರಾಜ್ಯಾದ್ಯಂತ ಕಾಂಗ್ರೆಸ್ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಅಂಗವಾಗಿ ಈ ಹಿಂದೆ ಸುದ್ದಿಗೋಷ್ಠಿ ನಡೆಸಿದ್ದ ಕೆಪಿಸಿಸಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದರು.
ಕಾಂಗ್ರೆಸ್ ಶಾಸಕರು ಇಲ್ಲದ ರಾಜ್ಯದ 100 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಪ್ರಚಾರ ಮಾಡಲಾಗುತ್ತಿತ್ತು ಅದರ ಅಂಗವಾಗಿ ಇಂದು ಚಾಲನೆ ನೀಡಲಾಗಿದೆ ಇನ್ನು ಮುಂಬರುವ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪ್ರಚಾರಾಂದೋಲನ ತೆರಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ತಿಳಿಸಿದರು.