ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಗುರುವಾರದಿಂದ ಆರಂಭವಾಗುತ್ತಿದ್ದು, ಈ ಬಾರಿ ಒಟ್ಟು 19 ದಿನಗಳ ಕಾಲ ಅಧಿವೇಶನ ನಡೆಯಲಿದೆ.
ಇಂದು 11 ಗಂಟೆಗೆ ಆರಂಭವಾಗುವ ಅಧಿವೇಶನದಲ್ಲಿ ಮೊದಲು ಒಂದೇ ದೇಶ ಒಂದೇ ಚುನಾವಣೆ ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು ಮಾರ್ಚ್ 8ರಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು 2021- 22 ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.
ಅಕ್ರಮ ಗಣಿಗಾರಿಕೆ, ಕುಡಿಯುವ ನೀರು, ಜಾನುವಾರುಗಳ ಮೇವು, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಪ್ರಮುಖ ವಿಚಾರಗಳು ಬಜೆಟ್ ಅಧಿವೇಶನದಲ್ಲಿ ಪ್ರತಿಧ್ವನಿಸಿದ್ದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ವೇದಿಕೆಯಾಗಲಿದೆ.
ಪ್ರತಿಪಕ್ಷಗಳ ಕೈಗೆ ಸಚಿವ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದೆ ಎನ್ನಲಾದ ಆರೋಪ ವಿಚಾರ ಅಧಿವೇಶನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆಗಳಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಭಾರಿ ವಿವಾದಕ್ಕೆ ಎಡೆ ಮಾಡಿಕೊಡುವ ಸಾಧ್ಯತೆ ದಟ್ಟವಾಗಿದೆ.
ಅಧಿವೇಶನ ಕುರಿತು ಮಾಹಿತಿ ನೀಡಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿವೇಶನ ಕುರಿತು ಮಾಹಿತಿ ನೀಡಿದ್ದು, ಇಂದಿನಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಮೊದಲ ಎರಡು ದಿನ ಒಂದು ದೇಶ ಒಂದು ಚುನಾವಣೆ ಕುರಿತು ಚರ್ಚೆ ನಡೆಯಲಿದೆ. ಮಾರ್ಚ್ ಎಂಟರಂದು ಬಜೆಟ್ ಮಂಡನೆಯಾಗಲಿದೆ. ಆನಂತರ ಮಾರ್ಚ್ 31ರವರೆಗೆ ಬಜೆಟ್ ಮೇಲಿನ ಚರ್ಚೆ, ಸರಕಾರದ ಉತ್ತರ ಪ್ರಶ್ನೋತ್ತರ ಕಲಾಪಗಳು ಇರಲಿವೆ ಎಂದು ತಿಳಿಸಿದರು.
ಲೇವಾದೇವಿ ತಿದ್ದುಪಡಿ ಕಾಯ್ದೆ ಸೇರಿ ಮೂರು ಮಸೂದೆಗಳು ಮಂಡನೆಯಾಗಲಿವೆ ಒಟ್ಟು 19 ದಿನ ಕಲಾಪ ನಡೆಯಲಿದೆ ಕೊರೊನಾ ಸಂಪೂರ್ಣ ನಿವಾರಣೆಯಾಗಿಲ್ಲ, ಇದನ್ನು ಗಮನದಲ್ಲಿರಿಸಿಕೊಂಡು ಅಧಿವೇಶನ ನಡೆಯಬೇಕಾಗಿದೆ. ಆರೋಗ್ಯ ಸಮಸ್ಯೆ ಇರುವ ಶಾಸಕರು ಅಧಿವೇಶನಕ್ಕೆ ಬರುವುದು ಬೇಡ. ಅಧಿಕಾರಿ, ಸಿಬ್ಬಂದಿ ಈ ಬಗ್ಗೆ ಎಚ್ಚರವಹಿಸಬೇಕು. ಆರೋಗ್ಯ ಸಮಸ್ಯೆ ಎದುರಾದರೆ ತಪಾಸಣೆ ಮತ್ತು ಚಿಕಿತ್ಸೆಗೆ ವ್ಯವಸ್ಥೆ ಇರಲಿದೆ ಎಂದು ತಿಳಿಸಿದ್ದಾರೆ.
ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವುದರೊಂದಿಗೆ ಅಧಿವೇಶನ ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಮೊದಲಿಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಲಾಗುವುದು. ಇನ್ನು ಸೋಮವಾರ ಬೆಳಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ