ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸದನದಲ್ಲಿ ಭದ್ರಾವತಿ ಶಾಸಕ ಸಂಗಮೇಶ ಯಾವ ಕಾರಣಕ್ಕೆ ಶರ್ಟ್ ಬಿಚ್ಚಿದ್ದರು ಎಂಬುದನ್ನು ಸ್ಪೀಕರ್ ಕಾಗೇರಿ ಅರ್ಥಮಾಡಿಕೊಳ್ಳಬೇಕಿತ್ತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸದನದಿಂದ ಸಂಗಮೇಶ್ವರ ಅವರನ್ನು ಅಮಾನತು ಮಾಡಿದ ಬಗ್ಗೆ ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಒಬ್ಬ ಶಾಸಕರು ಸದನದಲ್ಲಿ ಸುಮ್ಮಸುಮ್ಮನೆ ಅಂಗಿ ಬಿಚ್ಚುವುದಿಲ್ಲ ಅವರಿಗೆ ಆಗಿರುವ ಸಮಸ್ಯೆಯನ್ನು ಸರ್ಕಾರದಿಂದ ಕೇಳಿಕೊಳ್ಳಲಾಗಲಿಲ್ಲ. ಭದ್ರಾವತಿಯಲ್ಲಿ ಸಂಗಮೇಶ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ವಿನಾಕಾರಣ ಕೇಸ್ ಹಾಕಿದ್ದಾರೆ. ನ್ಯಾಯ ಸಿಗದೇ ಇದ್ದುದರಿಂದ ಸಂಗಮೇಶ ಪ್ರತಿಭಟಿಸಿದ್ದಾರೆ. ಇದಕ್ಕೆ ಅವರನ್ನು ಸ್ಪೀಕರ್ ಅಮಾನತು ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದೆ ಸದನದಲ್ಲಿ ಗೂಳಿಹಟ್ಟಿ ಶೇಖರ್ ಶರ್ಟ್ ಹರಿದುಕೊಂಡಿದ್ದ ಪ್ರಕರಣವನ್ನು ಉಲ್ಲೇಖಿಸಿದ ರಾಮಲಿಂಗರೆಡ್ಡಿ, ಸಂಗಮೇಶ್ ಏಕೆ ಅಂಗಿ ಬಿಚ್ಚಿದ್ದರು ಎಂಬುದನ್ನು ಅರ್ಥಮಾಡಿಕೊಳ್ಳಬೇಕಿತ್ತು. ರಾಜಕಾರಣ ಮಾಡಬಾರದು. ಸಂಗಮೇಶ ಸದನದಲ್ಲಿ ಶರ್ಟ್ ಬಿಚ್ಚಿದ್ದು ಸರಿಯಲ್ಲ. ಆದರೆ ಅವರಿಗೆ ಸರಿಯಾಗಿ ಮಾತನಾಡಲು ಅವಕಾಶವೇ ಕೊಡಲಿಲ್ಲ.
ಸಂಗಮೇಶ ತೊಂದರೆಯನ್ನು ಹೇಳಿಕೊಳ್ಳಲು ಅವಕಾಶ ಕೊಡಲಿಲ್ಲ. ಶಾಸಕರಿಗೆ ಈ ಸರ್ಕಾರದಲ್ಲಿ ಸೂಕ್ತ ಭದ್ರತೆ ಇಲ್ಲವೆಂದರೆ ಹೇಗೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಧೋರಣೆ ಸರಿಯಲ್ಲ. ಸಂಗಮೇಶ್ ಅವರನ್ನು ಸ್ಪೀಕರ್ ತಮ್ಮ ಕಚೇರಿಗೆ ಕರೆಸಿ ತೊಂದರೆ ಕೇಳಬೇಕಿತ್ತು. ಆದರೆ ಹಾಗೆ ಮಾಡದೆ ಏಕಾಏಕಿ ಸದನದಿಂದ ಅಮಾನತು ಮಾಡುವ ತೀರ್ಮಾನ ತೆಗೆದುಕೊಂಡಿರುವುದು ಸರಿಯಲ್ಲ ಎಂದು ಖಂಡಿಸಿದರು.