ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟ ಮಾರ್ಚ್ 18ರಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಂಡಿದೆ.
ಸಾರಿಗೆ ನಿಗಮಗಳಲ್ಲಿ ನೌಕರರಿಗೆ ಅನುಕೂಲವಾಗುವ ನಿಯಮಗಳು ಇಲ್ಲ. ಹೀಗಾಗಿ ಒಕ್ಕೂಟ ಸಾರ್ವಜನಿಕರಿಗೆ ತೊಂದರೆಯಾಗದಂತೆ ಧರಣಿ ಹಮ್ಮಿಕೊಂಡಿದೆ.
ನಡೆಯಲಿರುವ ಧರಣಿಯಲ್ಲಿ ಸಾರಿಗೆ ಸಿಬ್ಬಂದಿ ಆಯಾ ದಿನದಂದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಪಾಲ್ಗೊಳ್ಳಲಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಕೆ.ರಾಮಕೃಷ್ಣ ಪೂಂಜಾ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
2011 ರಿಂದ 2020 ರವರೆಗೆ ಸಾರಿಗೆ ಸಂಸ್ಥೆಗಳಿಗೆ ನೀಡಬೇಕಾದ ಬಾಕಿ ಮೊತ್ತ 3550 ಕೋಟಿ ರೂ. ಬಿಡುಗಡೆ ಮಾಡಬೇಕು. ನಾಲ್ಕು ನಿಗಮಗಳ ಎಲ್ಲಾ ನೌಕರರಿಗೆ ಸಮಾನ ವೇತನ ನೀಡಲು 2021- 22 ರ ಬಜೆಟ್ ನಲ್ಲಿ ವ್ಯತ್ಯಾಸದ ಹಣ ಘೋಷಿಸುವುದು. ಸಾರಿಗೆ ನೌಕರರಿಗೆ ನಗದುರಹಿತ ವೈದ್ಯಕೀಯ ಸೌಲಭ್ಯ ಜಾರಿಗೊಳಿಸಬೇಕು. ಆಡಳಿತ ವೆಚ್ಚ ಕಡಿಮೆ ಮಾಡಿ ಘಟಕಗಳಲ್ಲಿ ನೌಕರರಿಗೆ ಸಿಗಬೇಕಾದ ಸೌಲಭ್ಯ ಸಿಗುವಂತೆ ಮಾಡಬೇಕೆಂದು ಮನವಿ ಮಾಡಿದರು.