ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಸಚಿವರ ಪ್ರತಿಷ್ಠೆ ಕಣವಾಗಿರುವ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ಚುನಾವಣೆ ಮಂಗಳವಾರ (ಇಂದು) ನಡೆಯುತ್ತಿದ್ದು, 15 ಸ್ಥಾನಗಳಿಗಾಗಿ 33 ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ತೊಡಗಿದ್ದಾರೆ.
ದಳಪತಿಗಳ ಪ್ರತಿಷ್ಠೆ ಕಣ ಮೈಮುಲ್ ಚುನಾವಣೆ ಬನ್ನೂರು ರಸ್ತೆಯ ಆಲನಹಳ್ಳಿ ಕೆಎಂಎಫ್ ತರಬೇತಿ ಕೇಂದ್ರದಲ್ಲಿ ಬೆಳಗ್ಗೆ 10 ಗಂಟೆಯಿಂದ ಆರಂಭವಾಗಿದ್ದು, ಸಂಜೆ 4 ಗಂಟೆವರೆಗೂ ನಡೆಯಲಿದೆ. ಇಂದು ಸಂಜೆಯೇ ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಈ ನಡುವೆ ಮತದಾನ ಆರಂಭವಾಗುತ್ತಿದ್ದಂತಯೇ ಮತದಾನ ಕೇಂದ್ರದ ಒಳಗಡೆ ಮತ್ತು ಹೊರಗಡೆ ಗಲಾಟೆ ನಡೆದಿದೆ. ಎಂಡಿಸಿಸಿ ಉಪಾಧ್ಯಕ್ಷ ಸದಾನಂದ, ಮೈಮುಲ್ ಮಾಜಿ ಅಧ್ಯಕ್ಚ ಕೆ.ಜಿ.ಮಹೇಶ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನು ನೋಡಿದ ಪೊಲೀಸರು ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸಿದರು.
ಮೈಸೂರು ಮತ್ತು ಹುಣಸೂರು ಉಪ ವಿಭಾಗದ ಚುನಾವಣೆ
ಮೈಸೂರು ಉಪ ವಿಭಾಗ ಮತ್ತು ಹುಣಸೂರು ಉಪ ವಿಭಾಗದ ಚುನಾವಣೆ ಇದಾಗಿದ್ದು, ಮುಂದಿನ 5 ವರ್ಷಗಳವರೆಗೆ ಅಧಿಕಾರವಧಿ ಇರಲಿದೆ.
ಇನ್ನು ಮೈಸೂರು ಉಪ ವಿಭಾಗ-7 ಸ್ಥಾನಗಳಿಗೆ 14 ಜನ ಸ್ಪರ್ಧೆ, ಹುಣಸೂರು ಉಪ ವಿಭಾಗ-8 ಸ್ಥಾನಗಳಿಗೆ 15 ಜನ ಸ್ಪರ್ಧೆಯಲ್ಲಿದ್ದಾರೆ. 431 ಮೈಸೂರು, 617 ಹುಣಸೂರು ಉಪವಿಭಾಗದ ಮತಗಳಿವೆ. ಒಟ್ಟು 1048 ಜನರು ಮತ ಚಲಾಯಿಸಲಿದ್ದಾರೆ. ಒಬ್ಬ ವ್ಯಕ್ತಿಯು ಮೈಸೂರು ಉಪವಿಭಾಗದಲ್ಲಿ 7 ಮತ್ತು ಹುಣಸೂರು ವಿಭಾಗದಲ್ಲಿ 8 ಮತ ಚಲಾಯಿಸಲಿದ್ದಾರೆ.
ಇನ್ನು ಮಾಜಿ ಸಚಿವ ಜಿ.ಟಿ.ದೇವೇಗೌಡ ಬಣ ಸೋಲಿಸಲು ದಳಪತಿಗಳು ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್‌ನ ಎಲ್ಲಾ ಚಟುವಟಿಕೆಗಳಿಂದ ದೂರವಿರುವ ಜಿಟಿಡಿಯ ಶಕ್ತಿ ಕುಗ್ಗಿಸಲು ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಜಿಟಿಡಿ ತಮ್ಮದೇ ಹಿಡಿತ ಸಾಧಿಸಿದ್ದಾರೆ.
ನಿರ್ದೇಶಕ ಸ್ಥಾನಕ್ಕೆ ಶಾಸಕ ಕೆ.ಮಹದೇವ್ ಪುತ್ರ ಸ್ಪರ್ಧಿಸಿದ್ದು, ಮಹದೇವ್ ಅವರ ಮಗನನ್ನು ಸೋಲಿಸಲು ಸಾ.ರಾ.ಮಹೇಶ್ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಮೈಮುಲ್ ಚುನಾವಣೆ ಕಣದಲ್ಲಿ ಜಿ.ಟಿ.ದೇವೇಗೌಡರ ಪುತ್ರ ಹರೀಶ್‌ಗೌಡ ಕೂಡ ಇದ್ದು ಮತ ಕೇಂದ್ರದ ಬಳಿಯೇ ಮೊಕ್ಕಾಂ ಹೂಡಿದ್ದಾರೆ.