ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕಳಂಕಿತ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಸಿ (ಮಾ.17) ನಾಳೆ 11 ಗಂಟೆಗೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ದತ್ತಾತ್ರೇಯ ನಗರ ಮಹಿಳಾ ಘಟಕದ ಅಧ್ಯಕ್ಷೆ ಉಷಾ ಮೋಹನ್ ಹೇಳಿದ್ದಾರೆ.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಮೇಶ್ ಜಾರಕಿಹೊಳಿ ಅವರನ್ನು ರಕ್ಷಿಸುವ ಸಲುವಾಗಿ ಯಡಿಯೂರಪ್ಪ ಎಸ್‌ಐಟಿ ತನಿಖೆಗೆ ಲೈಂಗಿಕ ಕಿರುಕುಳ ಹಗರಣವನ್ನು ನೀಡಿದ್ದಾರೆ ಹೊರತು ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಸಲುವಾಗಿ ಅಲ್ಲ. ಆದ ಕಾರಣ ಈ ಕೂಡಲೇ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕೆಲಸ ಕೊಡಿಸುವುದಾಗಿ ಯುವತಿಯೊಬ್ಬಳನ್ನು ನಂಬಿಸಿ, ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಕುರಿತು ದಾಖಲೆ ಸಮೇತ ದೂರು ನೀಡಿದ್ದರೂ ಸಹ ಸರ್ಕಾರ ಮತ್ತು ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ದೂರು ನೀಡಿದವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗಿದೆ. ಸಿಡಿಯಲ್ಲಿರುವ ದೃಶ್ಯಾವಳಿ ನಿಜ ಎನ್ನುವುದಾದರೆ ರಮೇಶ್ ಜಾರಕಿಹೊಳಿ ಅವರು ಸಹ ತಪ್ಪಿತಸ್ಥರಲ್ಲವೇ ಎಂದು ಪ್ರಶ್ನಿಸಿದರು.
ಇತ್ತೀಚೆಗೆ ಸಂತ್ರಸ್ತೆ ಎಂದು ಹೇಳಿಕೊಂಡಿರುವ ಯುವತಿ ವಿಡಿಯೋ ಬಿಡುಗಡೆ ಮಾಡಿ, ತನಗೆ ರಕ್ಷಣೆ ನೀಡಬೇಕು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದಾರೆ. ಆದರೆ ಸರ್ಕಾರ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಎಫ್ ಐಆರ್ ದಾಖಲಿಸದೆಯೇ ಕಾನೂನುಬಾಹಿರವಾಗಿ ಎಸ್ಐಟಿ ರಚನೆಮಾಡಿದೆ ಎಂದರು.
ಸರ್ಕಾರಕ್ಕೆ ಈಗ ಇರುವ ಕುತೂಹಲ ವಿಡಿಯೋ ಮಾಡಿದ್ದು ಯಾರು ಎಂದು ಕಂಡುಹಿಡಿಯುವುದೇ ಆಗಿದೆ. ಆರೋಪಿ ರಮೇಶ್ ಜಾರಕಿಹೊಳಿ ಅವರ ಮೇಲೆ ಕ್ರಮ ಕೈಗೊಳ್ಳುವುದಾಗಲೀ ಅಥವಾ ಸಂತ್ರಸ್ತ ಯುವತಿಗೆ ರಕ್ಷಣೆ ಕೊಡುವುದಾಗಲೀ ಅಲ್ಲ ಎಂಬುದು ಸರ್ಕಾರದ ಧೋರಣೆಯಿಂದ ತಿಳಿದು ಬರುತ್ತಿದೆ ಎಂದು ಹೇಳಿದರು.
ವಿಡಿಯೋ ನಕಲಿ ಎಂದಾದರೆ ಇಡೀ ದೇಶದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಅಪರಾಧ ಕಂಡುಹಿಡಿಯುವ ಲ್ಯಾಬ್‌ಗಳಿವೆ ಅವುಗಳಿಗೆ ಸಿಡಿ ಕಳಿಸಿ ಅನುಮಾನ ಬಗೆಹರಿಸಬಹುದಲ್ಲವೇ? ಆದರೂ ಸರ್ಕಾರದ ಈ ಧೋರಣೆ ಅನುಮಾನ ಮೂಡಿಸುವಂತಿಂದೆ. ಪ್ರಭಾವಿ ರಾಜಕಾರಣಿಯನ್ನು ರಕ್ಷಿಸುವ ಹುನ್ನಾರ ಎಂದರು.
ಯಡಿಯೂರಪ್ಪನವರ ಆಡಳಿತದಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲವೇ? ತಪ್ಪಿತಸ್ಥರಿಗೆ ಶೀಕ್ಷೆಯಾಗುವುದಿಲ್ಲವೇ? ಬಲಿಪಶುಗಳಿಗೆ ನ್ಯಾಯ ಸಿಗುವುದಿಲ್ಲವೇ? ಸರ್ಕಾರವು ಈ ಕೂಡಲೆ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಸಂತ್ರಸ್ತ ಯುವತಿಗೆ ರಕ್ಷಣೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷವು ಒತ್ತಾಯಿಸುತ್ತದೆ ಎಂದರು.
ಯೋಗಿತಾ ರೆಡ್ಡಿ ಇದ್ದರು.