ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿಗೆ ನೋಟಿಸ್ ನೀಡಿದ್ದರೂ, ಆಕೆ ಇದುವರೆಗೂ ಪೊಲೀಸರಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ರಕ್ಷಣೆ ಕೋರಿ ಅಜ್ಞಾತ ಸ್ಥಳದಿಂದ ಯುವತಿ ವಿಡಿಯೋ ವೊಂದನ್ನು ಹರಿಬಿಟ್ಟಿದ್ದಳು. ಬಳಿಕ ಕಬ್ಬನ್ ಪಾರ್ಕ್ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಯುವತಿಯ ಮನೆಗೆ ನೋಟಿಸ್ ಅಂಟಿಸಿದ್ದರು.
ನೀವು ನಿಗದಿ ಮಾಡಿದ ದಿನಾಂಕ, ಸಮಯ, ಸ್ಥಳದಲ್ಲೇ ಹೇಳಿಕೆ ಪಡೆದುಕೊಳ್ಳುವುದಾಗಿ ಪೊಲೀಸರು ನೋಟಿಸ್ ನಲ್ಲಿ ಉಲ್ಲೇಖಿಸಿದ್ದರು. ನೋಟಿಸ್ ಜಾರಿಗೊಳಿಸಿದ ಕಬ್ಬನ್ ಪಾರ್ಕ್ ಠಾಣೆಯ ಇನ್ಸ್ಪೆಕ್ಟರ್, ತಮ್ಮ ದೂರವಾಣಿ ಸಂಖ್ಯೆ, ಇ-ಮೇಲ್ ಐಡಿ ಎಲ್ಲವನ್ನೂ ನೀಡಿ ಯುವತಿಗೆ ಇ-ಮೇಲ್ ಮಾಡಿದ್ದರು. ಆದರೆ, ಇದೂವರೆಗೂ ಯುವತಿ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ ಎಂದು ತಿಳಿದು ಬಂದಿದೆ.
ಇನ್ನು ಈ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಅವರನ್ನು ವಿಶೇಷ ತನಿಖಾ ತಂಡದ (ಎಸ್‍ಐಟಿ) ಅಧಿಕಾರಿಗಳು ಸೋಮವಾರ 2 ಗಂಟೆಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದರು.
ಸೋಮವಾರ ತಡರಾತ್ರಿ ಸದಾಶಿವನಗರದಲ್ಲಿರುವ ರಮೇಶ್ ಜಾರಕಿಹೊಳಿ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿದ್ದು, 4 ಪುಟಗಳ ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿದೆ. ಎಸಿಪಿ ಧರ್ಮೆಂದ್ರ ಎದುರು ಜಾರಕಿಹೊಳಿ ಹೇಳಿಕೆ ನೀಡಿದ್ದು, ರಾಜಕೀಯ ಷಡ್ಯಂತ್ರ, ಬ್ಲ್ಯಾಕ್‍ಮೇಲ್ ಬಗ್ಗೆ ಮಾಹಿತಿ ನೀಡಿದ್ದರು ಎಂದು ಹೇಳಲಾಗುತ್ತಿದೆ.
ನನ್ನ ವಿರುದ್ಧ 4 ತಿಂಗಳಿನಿಂದ ಬ್ಲ್ಯಾಕ್‍ಮೇಲ್ ನಡೆಯುತ್ತಿತ್ತು. ನಿನ್ನನ್ನು ರಾಜಕೀಯವಾಗಿ ಅಂತ್ಯಗೊಳಿಸಲಾಗುವುದು ಎಂದು ಧಮ್ಕಿ ಹಾಕಿದ್ದರು. ನನ್ನ ಆಪ್ತನ ಮೂಲಕ ಹಣಕ್ಕಾಗಿ ನನ್ನ ಮೇಲೆ ಒತ್ತಡ ಹಾಕಿದ್ದರು. ಆದರೆ, ನಾನು ಆ ಒತ್ತಡಕ್ಕೆ ಮಣಿದಿರಲಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ 4 ತಿಂಗಳಿಂದ ನಡೆಯುತ್ತಿದ್ದ ಷಡ್ಯಂತ್ರದ ಬಗ್ಗೆ ಎಸ್‍ಐಟಿಗೆ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.