ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಲು ಹಣ ನೀಡಿದ್ದಾರೆ ಎಂಬ ಅನುಮಾನದ ಮೇಲೆ ನಗರದ ಉದ್ಯಮಿ ಒಬ್ಬರ ಮನೆಯ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ರಕರಣದ ತನಿಖೆ ಸರಿಯಾದ ಹಾದಿಯಲ್ಲಿದೆ. ತನಿಖಾ ಸಂಸ್ಥೆ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಜೆಪಿ ನಗರದಲ್ಲಿರುವ ಬೆಂಗಳೂರು ಮೂಲದ ಉದ್ಯಮಿ ಮನೆಯ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಶಂಕಿತರು ಉದ್ಯಮಿ ಜೊತೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗುತ್ತಿದೆ.
ಉದ್ಯಮಿ ಶಂಕಿತರಿಗೆ ಹಣಕಾಸು ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ. ಮಾಹಿತಿ ಖಚಿತವಾಗಿದ್ದರಿಂದ ದಾಳಿ ನಡೆಸಿ 2 ಗಂಟೆ ಪರಿಶೀಲನೆ ಮಾಡಲಾಯಿತು.
ಮನೆಯಲ್ಲಿ ಉದ್ಯಮಿ ಇರಲಿಲ್ಲ. ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಾಯಿತು. 10 ದಿನಗಳ ಹಿಂದೆ ಮನೆಯಿಂದ ಹೊರಬಂದಿದ್ದಾರೆ ಹೀಗಾಗಿ ಅವರ ಮನೆಯ ಸಿಸಿ ಕ್ಯಾಮರಾ ತುಣುಕನ್ನು ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಪ್ರಕರಣದಲ್ಲಿ ಹೆಸರು ಹೇಳಿ ಬಂದಿರುವವರು ತಮ್ಮ ವಾಸಸ್ಥಳಗಳನ್ನು ಬದಲಾಯಿಸುತ್ತಿದ್ದಾರೆ ಮತ್ತು ಮೊಬೈಲ್ ಬಳಸುತ್ತಿಲ್ಲ. ಹೀಗಾಗಿ ಆರೋಪಿಗಳನ್ನು ಪತ್ತೆ ಮಾಡುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಘಟನಾ ಸ್ಥಳದಲ್ಲಿದ್ದ ಮಹಿಳೆಯೊಂದಿಗೆ ಶಂಕಿತರು ಸಹ ಇದ್ದಾರೆ ಎಂದು ಮೂಲಗಳು ತಿಳಿಸಿವೆ, ಈಗಾಗಲೇ ನೆರೆಯ ರಾಜ್ಯಗಳಿಗೂ ವರದಿ ನೀಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.