ವಿಜಯಪಥ ಸಮಗ್ರ ಸುದ್ದಿ
ಮೈಸೂರು: ಬೆಡ್ ಬುಕ್ಕಿಂಗ್ ದಂಧೆ ಬಯಲಿಗೆಳೆದ ಯುವ ಸಂಸದ ತೇಜಸ್ವಿ ಸೂರ್ಯ ಅವರನ್ನು ಅಭಿನಂದಿಸುವ ಬದಲು ಕುಂಟು ನೆಪ ಇಟ್ಟುಕೊಂಡು ಅವರ ವಿರುದ್ಧ ದಾಳಿ ನಡೆಸುತ್ತಿರುವುದು ಎಷ್ಟು ಸರಿ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಕಾರ್ಪೊರೇಟರ್, ಶಾಸಕರು, ಸಂಸದರು, ಸಚಿವರು, ಕೇಂದ್ರ ಸಚಿವರವರೆಗೂ ಸಾವಿರಾರು ಜನರಿದ್ದಾರೆ, ಕೊರೊನಾ ಅಪ್ಪಳಿಸಿರುವ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಿರುವುದು ಅನಿವಾರ್ಯ ಮತ್ತು ತುರ್ತಾಗಿದೆ.
ಈ ವೇಳೆ ತೇಜಸ್ವಿ ಸೂರ್ಯ ಅವರು ಬೆಡ್ ಬ್ಲಾಕಿಂಗ್ ದಂಧೆ ಹಗರಣವನ್ನು ಬಯಲಿಗೆಳೆದಿದ್ದಾರೆ, ಮಾನವೀಯತೆಯನ್ನೇ ಮರೆತು ನಡೆಯುತ್ತಿರುವ ಈ ದಂಧೆಯನ್ನು ಗೊತ್ತುಮಾಡಿ ಅದನ್ನು ಬಯಲಿಗೆಳೆದ ನಂತರ ಸಾವಿರಾರು ಬೆಡ್ ಗಳು ಸೋಂಕಿತರಿಗೆ ಸಿಗುತ್ತಿದೆ. ಇಂತಹ ಉತ್ತಮ ಕೆಲಸ ಮಾಡಿದ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.
ಇನ್ನು ಅಂದು ಪಟ್ಟಿಯನ್ನು ಓದುವಾಗ ಒಂದೇ ಕೋಮಿಗೆ ಸೇರಿದವರ ಹೆಸರಿತ್ತು ಎಂಬ ನೆಪ ಇಟ್ಟುಕೊಂಡು ಅವರು ಮಾಡಿರುವ ಒಳ್ಳೆಯ ಕೆಲಸ ಮರೆತು ಅವರ ಮೇಲೆ ಅವ್ಯಾಹತವಾಗಿ ಆಕ್ರಮಣ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಒಂದು ಕೋಮಿನವರ ಪಟ್ಟಿ ಸಿಕ್ಕಿದ್ದರಿಂದ ಅವರ ಹೆಸರನ್ನು ತೇಜಸ್ವಿ ಸೂರ್ಯ ಹೇಳಿರಬಹುದು, ಆದರೆ ನಂತರ ಪೊಲೀಸರು ಬಂಧಿಸಿದವರಲ್ಲಿ ಬೇರೆ ಕೋಮಿನವರೂ ಇದ್ದಾರೆ. ಎಲ್ಲಾ ಕೋಮಿನವರಿದ್ದಾರೆ. ಹೀಗಿರುವಾಗ ಎಲ್ಲವನ್ನೂ ಬಿಟ್ಟು ಕೋಮು ವಿಚಾರ ಇಟ್ಟುಕೊಂಡು ಯುವ ಸಂಸದರ ಉತ್ತಮ ಕೆಲಸವನ್ನು ಮಟ್ಟ ಹಾಕಲು ನೋಡುವ ಕೀಳು ರಾಜಕೀಯ ಮಾಡುವ ಬದಲು ನಿಮ್ಮ ನಿಮ್ಮ ಕ್ಷೇತ್ರಗಳ ಜನರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸುವತ್ತ ಗಮನಹರಿಸಿ ಎಂದು ಹೇಳಿದರು.