ವಿಜಯಪಥ ಸಮಗ್ರ ಸುದ್ದಿ
ಹಾಸನ: ಕೊರೊನಾ ಮಹಾಮಾರಿ ರಾಜ್ಯವನ್ನು ಇನ್ನಿದಂತೆ ಬಾಧಿಸುತ್ತಿದ್ದು, ಚಿಕಿತ್ಸೆ ಬೆಡ್ ಸಿಗದೆ ಜನರು ಮನೆಯಲ್ಲೇ ಮೃತಪಡುತ್ತಿದ್ದಾರೆ. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿವೆ ಎಂದು ಜೆಡಿಎಸ್‌ನ ಹಾಸನ ಸಂಸದ ಪ್ರಜ್ವಲ್ ರೇವಣ್ಣ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಕೊರೊನಾ ನಿರ್ವಹಣೆಯ ವಿಚಾರದಲ್ಲಿ ದೆಹಲಿಯಲ್ಲಿ ಹತ್ತು ಸಾವಿರ ಬೆಡ್ ನಿರ್ಮಾಣ ಮಾಡಿದ್ದೇವೆ ಎನ್ನುವ ಪ್ರಧಾನಿ ಮೋದಿಯ ಹೇಳಿಕೆ ಬರೀ ಸುಳ್ಳು ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬಜೆಟ್ ನಲ್ಲಿ 35 ಸಾವಿರ ಕೋಟಿ ರೂ.ಗಳನ್ನು ಲಸಿಕೆಗಾಗಿ ಮೀಸಲಿಡಲಾಗಿದೆ ಎನ್ನುವ ಮಾತನ್ನು ಮೋದಿಯವರು ಹೇಳಿದ್ದರು. ಬಜೆಟ್ ಅಪ್ರೂವಲ್ ಕೂಡಾ ಆಗುತ್ತೆ. ಆ ದುಡ್ಡು ಎಲ್ಲಿಗೆ ಹೋಯಿತು ಎಂದು ಪ್ರಜ್ವಲ್ ಪ್ರಶ್ನಿಸಿದ್ದಾರೆ.
ರಾಜ್ಯಕ್ಕೆ ಲಸಿಕೆ ನೀಡಲು ನಾಲ್ಕು ನೂರು ರೂಪಾಯಿ ನಿಗದಿ ಮಾಡಿದ್ದಾರೆ. ಈ ಕಡೆ ರಾಜ್ಯಕ್ಕೆ ಕುಡಬೇಕಿರುವ ಜಿಎಸ್ಟಿ ದುಡ್ಡು ಕೊಡುವುದಿಲ್ಲ, ಲಸಿಕೆ ಹೆಚ್ಚು ಕೊಡುವುದಿಲ್ಲ. ಆಕ್ಸಿಜನ್ ಹೆಚ್ಚುವರಿ ಕೇಳಿದರೆ ನಮ್ಮ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಕೇಸ್ ಹಾಕುತ್ತಾರೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಯಾಕೆ ಮೋದಿ ಸರ್, ಕರ್ನಾಟಕದ ಜನತೆ ಏನು ತಪ್ಪು ಮಾಡಿದ್ದಾರೆ. ನಿಮಗೆ 25 ಸಂಸದರನ್ನು ಕೊಟ್ಟಿದ್ದು ತಪ್ಪಾ? ಸ್ವರ್ಗಾನೇ ಇಳಿಸುತ್ತಾರೆಂದು ಮಾತನಾಡುತ್ತಿದ್ದ ರಾಜ್ಯ ಬಿಜೆಪಿ ನಾಯಕರು ಈಗ ಏನು ಹೇಳುತ್ತಾರೆ ಎಂದು ಪ್ರಜ್ವಲ್ ಪ್ರಶ್ನಿಸಿದ್ದಾರೆ.
ಇಡೀ ದೇಶದಲ್ಲಿ ಅತಿಹೆಚ್ಚು ಸೋಂಕಿತರು ವರದಿಯಾಗುತ್ತಿರುವುದು ನಮ್ಮ ಕರ್ನಾಟಕದಲ್ಲಿ. ಸ್ಮಶಾನದಲ್ಲಿ ಕಿಲೋಮೀಟರ್ ಗಟ್ಟಲೆ ಕ್ಯೂ ಇದೆ. ಇನ್ನು ಮುಂದೆಯಾದರೂ ಎಚ್ಚೆತ್ತುಕೊಂಡು ರಾಜ್ಯದ ಜನತೆಯನ್ನು ಉಳಿಸಿಕೊಳ್ಳುವ ಕೆಲಸವನ್ನು ಮಾಡಿ ಎಂದು ಮನವಿ ಮಾಡಿದ್ದಾರೆ.
ಎಷ್ಟೋ ಜನ ಬೆಡ್ ಸಿಗದೇ ಮನೆಯಲ್ಲೇ ಸಾವನ್ನಪ್ಪುತ್ತಿದ್ದಾರೆ. ಜನರ ಆಕ್ರೋಶ ಹೊರಬರುವ ಮುನ್ನ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದ್ದಾರೆ.
MP @iPrajwalRevanna's valid questions to govt.
🔸What happened to 35000 crore allocated towards the Vaccination?
🔸Why our state not getting enough Vaccines?
🔸Is that mistake People of Karnataka blessed 25 MP's to BJ?
🔸 State GST share also not released? pic.twitter.com/pKqftdznbW
— Prathap ಕಣಗಾಲ್ (@Kanagalogy) May 8, 2021