ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ದುರ್ಬಲ ವರ್ಗಗಳಿಗೆ 5 ಸಾವಿರ ರೂಪಾಯಿ ಸಹಾಯಧನ ಮತ್ತು ಮೂರು ತಿಂಗಳ ವಿದ್ಯುತ್ ಮತ್ತು ನೀರಿನ ಬಿಲ್ ಮನ್ನಾ ಮಾಡಬೇಕು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆಗ್ರಹ
ಪಕ್ಷದ ಮಾಧ್ಯಮ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಘೋಷಿಸಿರುವ ಲಾಕ್ ಡೌನ್ ನಿಂದಾಗಿ ಜನತೆ ಅನೇಕ ಸಂಕಷ್ಟಗಳನ್ನು ಅನುಭವಿಸಲಿದ್ದಾರೆ. ಈಗಾಗಲೇ ಕಳೆದ ಲಾಕ್ ಡೌನ್ ನಿಂದ ಉಂಟಾಗಿರುವ ಸಮಸ್ಯೆಗಳಿಂದ ಜನತೆ ಇನ್ನೂ ಚೇತರಿಸಿಕೊಂಡಿಲ್ಲ. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ದುರ್ಬಲ ವರ್ಗಗಳಿಗೆ ಸಹಾಯ ಧನ ನೀಡಬೇಕು ಎಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.
ಮುಖ್ಯಮಂತ್ರಿಗಳಿಗೆ ಪತ್ರ ಮುಖೇನ ಸಲಹೆ ಮತ್ತು ಅಗ್ರಹಗಳನ್ನು ಮುಂದಿಟ್ಟಿರುವ ಅವರು ಕಾರ್ಮಿಕರು, ಆಟೋ ಹಾಗೂ ಕ್ಯಾಬ್ ಡ್ರೈವರ್ ಗಳು, ಪೌರ ಕಾರ್ಮಿಕರಿಗೆ ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವ ಕಾರ್ಮಿಕ ವರ್ಗಗಳಿಗೆ ತಿಂಗಳಿಗೆ 5 ಸಾವಿರ ರೂಪಾಯಿಗಳ ನೆರವು ನೀಡಬೇಕು. ಮೂರು ತಿಂಗಳ ಅವಧಿಗೆ ಉಚಿತ ವಿದ್ಯುತ್, ನೀರು ನೀಡಬೇಕು. ಅಲ್ಲದೆ ಲಾಕ್ ಡೌನ್ ಅವಧಿಯಲ್ಲಿ ಮನೆ ಬಾಗಿಲಿಗೆ ಪಡಿತರ ವಿತರಿಸುವಂತೆ, ಬಡತನ ರೇಖೆಗಿಂತ ಕೆಳಗಿರುವ ಮತ್ತು ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬಗಳಿಗೆ 5 ಲಕ್ಷ ರೂಪಾಯಿಯ ಆರೋಗ್ಯ ವಿಮೆ ನೀಡುವ ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟರು.
ಸಿಎಂ ಮುಂದೆ ಜನತೆ ಪರವಾಗಿ ಪೃಥ್ವಿರೆಡ್ಡಿ ಇಟ್ಟ ಸಲಹೆ ಮತ್ತು ಬೇಡಿಕೆಗಳು
- ದೈನಂದಿನ ಕೂಲಿ ಕಾರ್ಮಿಕರಿಗೆ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ, ರಸ್ತೆ ಬದಿ ವ್ಯಾಪಾರಿಗಳಿಗೆ, ಆಟೋ ಮತ್ತು ಕ್ಯಾಬ್ ಚಾಲಕರು ಹಾಗೂ ಅನೇಕ ಬಗೆಯ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ ರೂ .5000 ಪರಿಹಾರ ನೀಡಬೇಕು.
- ಅಕ್ಕಿ, ಬೇಳೆ, ಎಣ್ಣೆ ಮತ್ತು ಇತರ ಅಡುಗೆ ಸಾಮಗ್ರಿಗಳನ್ನು ಒಳಗೊಂಡ ಕನಿಷ್ಠ 2 ತಿಂಗಳ ಉಚಿತ ಪಡಿತರವನ್ನು ಮನೆ ಬಾಗಿಲಿಗೆ ವಿತರಣೆ ಮಾಡಿ.
- 3 ತಿಂಗಳ ಅವಧಿಗೆ ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ಮತ್ತು 20000 ಲೀಟರ್ ಉಚಿತ ನೀರನ್ನು ಪೂರೈಸಿ.
- ಎಲ್ಲಾ ಬಿಪಿಎಲ್ ಕಾರ್ಡುದಾರರು ಮತ್ತು ಅಂತ್ಯೋದಯ ಕಾರ್ಡ್ ಹೊಡಿರುವವರಿಗೆ ಇಂದಿರಾ ಕ್ಯಾಂಟೀನ್‌ಗಳು ಮತ್ತು ಇತರ ಸರ್ಕಾರಿ ನೆರವಿನ ಸೌಲಭ್ಯಗಳ ಮೂಲಕ ಉಚಿತ ಊಟ ಸರಬರಾಜು ಮಾಡಿ.
- ಗೃಹಸಾಲ, ವ್ಯಾಪಾರ ಮತ್ತು ವ್ಯವಹಾರ ಸಾಲಗಳ ಮೇಲಿನ ಬಡ್ಡಿ ಕಡಿತ ಮಾಡಿ ಮತ್ತು ಸಾಲ ಮರು ಪಾವತಿಗೆ ವಿನಾಯಿತಿ ನೀಡಿ.
- ಆಕ್ಸಿಮೀಟರ್, ಥರ್ಮಾಮೀಟರ್, ಔಷಧ ಮತ್ತು ಇತರ ವೈದ್ಯಕೀಯ ಅಗತ್ಯಗಳನ್ನು ಒಳಗೊಂಡಿರುವ ಕಿಟ್‌ಗಳನ್ನು ಮನೆ ಮನೆಗೆ ವಿತರಿಸಿ. ಅಗತ್ಯ ಇರುವವರು ಆಸ್ಪತ್ರೆಗಳಿಗೆ ಬೇಟಿ ನೀಡುತ್ತಿರುವುದನ್ನು ಖಚಿತ ಪಡಿಸಿಕೊಳ್ಳಿ.
- ಕೋವಿಡ್‌ನಿಂದಾಗಿ ಅನಾರೋಗ್ಯಕ್ಕೆ ಒಳಗಾಗುವವರು ಮತ್ತು ಇತರ ಕಾಯಿಲೆಗಳನ್ನು ಹೊಂದಿರುವವರು, ಅಲ್ಲದೆ ವಿಶೇಷ ಚಿಕಿತ್ಸೆಯ ಅಗತ್ಯವಿರುವ ಬಿಪಿಎಲ್ ಕುಟುಂಬಗಳಿಗೆ 5 ಲಕ್ಷ ರೂ.ಗಳ ಆರೋಗ್ಯ ವಿಮೆಯನ್ನು ಒದಗಿಸಬೇಕು. ಮುಂದಿನ ಎರಡು ತಿಂಗಳ ಮಟ್ಟಿಗೆ ಆರೋಗ್ಯ ಸಂಬಂಧಿ ಖರ್ಚಿಗೆ ತಿಂಗಳಿಗೆ 5,000 ರೂ. ನೀಡಬೇಕು.
- ಪ್ರಸ್ತುತ ಶೈಕ್ಷಣಿಕ ವರ್ಷದ ಶಾಲೆ / ಕಾಲೇಜು ಶುಲ್ಕವನ್ನು ಪಾವತಿಸಲು ಪ್ರತಿ ವಿದ್ಯಾರ್ಥಿಗೆ 15,000 ರೂ.ಗಳ ವಿದ್ಯಾರ್ಥಿವೇತನವನ್ನು ನೀಡಿ.
- ದಯವಿಟ್ಟು ಸರ್ಕಾರಿ ಆರೋಗ್ಯ ಕಾರ್ಯಕರ್ತರು, ಸಾರಿಗೆ ಕಾರ್ಮಿಕರು, ಪೌರಕರ್ಮಿಕರು ಮತ್ತು ಇತರ ಎಲ್ಲಾ
ಸರ್ಕಾರಿ ಸಿಬ್ಬಂದಿಗಳಿಗೆ ಸಮರ್ಪಕವಾಗಿ ಸಂಪೂರ್ಣ ಸಂಬಳ ನೀಡಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. - ಸರ್ಕಾರಿ,ಖಾಸಗಿ ವಲಯಗಳು ಮತ್ತು ಎಲ್ಲ ಮುಖ್ಯವಾಹಿನಿಯ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುವ ಜೀವ ವಿಮಾ ಮೊತ್ತವನ್ನು ಹೆಚ್ಚಿಸಿ.
ಈ ಎಲ್ಲಾ ಸಲಹೆಗಳನ್ನು ಪರಿಗಣಿಸಿ ತಕ್ಷಣ ಜಾರಿಗೊಳಿಸಿ ಜನತೆಯ ಸಂಕಷ್ಟಗಳ ಜೊತೆ ರಾಜ್ಯಸರ್ಕಾರ ನಿಲ್ಲಬೇಕು ಎಂದು ಪೃಥ್ವಿ ರೆಡ್ಡಿ ಆಗ್ರಹಿಸಿದರು.