ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಸರಕಾರ ಜಾರಿಗೆ ತಂದಿರುವ ಲಾಕ್ ಡೌನ್ ನಿಂದ ಈಗಾಗಲೇ ಹಸಿವಿನಿಂದ ತತ್ತರಿಸಿ ಹೋಗಿರುವ ಬಡ ಜನತೆಯ ಹೊಟ್ಟೆ ಮೇಲೆ ಮತ್ತೊಮ್ಮೆ ಹೊಡೆದಂತೆ ಆಗಿದೆ. ಸರಕಾರ ಜನತೆಯ ಆಗ್ರಹದ ಮೇರೆಗೆ ಘೋಷಿಸಿರುವ 1111.82 ಕೋಟಿ ರೂಪಾಯಿಯ ಪ್ಯಾಕೆಜ್ ಏನೇನೂ ಸಾಲದು, ಇದು ಜನತೆಯ ಮೂಗಿಗೆ ತುಪ್ಪ ಸವರಿ ಮೋಸ ಮಾಡುವ ತಂತ್ರವಾಗಿದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಟೀಕಿಸಿದರು.
ಒಟ್ಟಾರೆ ಲಾಕ್ ಡೌನ್ ಆಹಾರವಿಲ್ಲದೆ ಸಾಯುವ ಪರಿಸ್ಥಿತಿಯನ್ನು ತಂದಿಟ್ಟಿದೆ. ಬಿಬಿಎಂಪಿ ಮತ್ತು ನಗರ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಆಹಾರ ನೀಡಲು 25 ಕೋಟಿ ಮತ್ತು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಐದು ಕೆಜಿ ಅಕ್ಕಿ ನೀಡಲು ಕೇವಲ 180 ಕೋಟಿ ರೂಪಾಯಿ ನಿಗದಿ ಮಾಡಿರುವ ಸರಕಾರ ಹಸಿವು ನೀಗಿಸುವ ಉದ್ದೇಶವನ್ನು ಕಾಳಜಿಯಿಂದ ಮಾಡಿದೆಯೇ? ಹತ್ತು ಕೆಜಿ ಅಕ್ಕಿಯಿಂದ ಈಗ ಐದು ಕೆಜಿಗೆ ಇಳಿಸಿರುವ ಸರಕಾರ ಹಸಿದ ಹೊಟ್ಟೆಯ ಮೇಲೆ ಹೊಡೆಯುವ ತಂತ್ರವನ್ನು ನಯವಾಗಿ ರೂಪಿಸಿದೆ.
ಸರಕಾರ ಉಲ್ಲೇಖ ಮಾಡಿರುವಂತೆ ರೈತರು ಮತ್ತು ಸ್ವಸಹಾಯ ಸಂಘಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಭೂ ಅಭಿವೃದ್ಧಿ ಬ್ಯಾಂಕ್ ಗಳಿಂದ ಪಡೆದಿರುವ ಸಾಲದ ಮರುಪಾವತಿಯನ್ನು ಜುಲೈ 31 ರ ವರೆಗೆ ವಿಸ್ತರಿಸಿದೆ. ಇದರಿಂದ 4.25 ಲಕ್ಷ ರೈತರಿಗೆ ಅನುಕೂಲ ಆಗಲಿದೆ ಎಂದು ಸರ್ಕಾರ ತಿಳಿಸಿದೆ. ಆದರೆ ಇಲ್ಲಿ ಸರಕಾರಕ್ಕೆ ಇರುವ ದೂರದೃಷ್ಟಿಯ ಕೊರತೆ ಎದ್ದು ಕಾಣುತ್ತಿದೆ. ಆರ್ಥಿಕ ಸಂಕಷ್ಟದಲ್ಲಿ ಕಳೆದ ಎರಡು ವರ್ಷಗಳಿಂದ ನರಳುತ್ತಿರುವ ಜನತೆಯ ನೆರವಿಗಾಗಿ ಕೇವಲ ಎರಡೇ ಎರಡು ತಿಂಗಳ ತನಕ ಸಾಲ ಮರುಪಾವತಿಯನ್ನು ಮುಂದೂಡಿರುವುದು ಮೂರ್ಖ ನಡೆಯಲ್ಲವೆ ಎಂದು ಪ್ರಶ್ನಿಸಿದರು.
ಸರ್ಕಾರ ತಿಳಿಸಿರುವ ಬ್ಯಾಂಕ್ ಗಳಿಂದ ಕೃಷಿ ಚಟುವಟಿಕೆಗೆ ಮಾತ್ರ ಸಾಲವನ್ನು ಪಡೆದಿಲ್ಲ. ಸಣ್ಣ ಸಣ್ಣ ಉದ್ದಿಮೆಗಳು, ವ್ಯಾಪಾರ ಮಾಡಲು ಸಾಲ ಪಡೆದ ಲಕ್ಷಾಂತರ ಮಂದಿ ಇದ್ದಾರೆ. ಇವರ ವ್ಯವಹಾರದ ಮೇಲೆ ಕಳೆದ ಎರಡು ವರ್ಷಗಳಲ್ಲಿ ದೊಡ್ಡ ಹೊಡೆತ ಬಿದ್ದಿದೆ. ಅಲ್ಲದೇ ಐದು ಸೆಂಟ್ಸ್ ಜಾಗದಲ್ಲಿ ವ್ಯವಹಾರ, ಹೌಸಿಂಗ್ ಲೋನ್ ಗಳನ್ನು ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಪಡೆದವರ ನೋವು ಸರಕಾರಕ್ಕೆ ನಾಟುವುದಿಲ್ಲವೆ?
ಆಟೋ ಮತ್ತು ಕ್ಯಾಬ್ ಚಾಲಕರು ಸರಕಾರ ಪ್ಯಾಕೆಜ್ ಘೋಷಿಸಿದಂತೆ ಆಕ್ರೋಶಕ್ಕೆ ಒಳಗಾಗಿದ್ದಾರೆ. ಯಾಕೆಂದರೆ ಅವರಿಗೆ ಹಿಂದಿನ ನೆರವಿನ ಹಣವೇ ಬಂದಿಲ್ಲ! ತಿಂಗಳಿಗೆ 3 ಸಾವಿರ ರೂಪಾಯಿ ಪರಿಹಾರ ಧನ ಘೋಷಿಸಿರುವ ಸರಕಾರ ಇದಕ್ಕೆ ಸಮರ್ಪಕವಾದ ಯೋಜನೆಯನ್ನು ಹಾಕಿಕೊಂಡಿಲ್ಲ. ಕಳೆದ ಬಾರಿ ನೀಡಿದ್ದ ಪರಿಹಾರ ಧನ ಮುಕ್ಕಾಲು ಪಾಲು ಚಾಲಕರಿಗೆ ತಲುಪಿಲ್ಲ. ಸರಕಾರ ರೂಪಿಸಿದ ಸೇವಾಸಿಂಧು ಆಪ್ ಒಂದು ಗೊಂದಲಗಳ ಮೂಟೆ! ಇದರಲ್ಲಿ ತಾಂತ್ರಿಕ ಸಮಸ್ಯೆಗಳು, ಸರಕಾರಕ್ಕೆ ಸಲ್ಲಿಸಬೇಕಾದ ಅಗತ್ಯ ದಾಖಲೆಗಳ ಸಮಸ್ಯೆ ಇತ್ಯಾದಿಗಳಿಂದ ಅನೇಕ ಚಾಲಕರಿಗೆ ಇದು ತಲುಪುವುದು ಅಸಾಧ್ಯ!
ಸರ್ಕಾರ ಕೆ.ಆರ್.ಐ.ಡಿ.ಎಲ್ ಮೊದಲಾದ ಸಂಸ್ಥೆಗಳಿಗೆ ಗುತ್ತಿಗೆ ನೀಡಿ ಕಂಡಕಂಡಲ್ಲಿ ರಸ್ತೆ ಆಗೆಯುವಂತ ಕಾಮಗಾರಿಗಳಲ್ಲಿ ತಲ್ಲೀನವಾಗಿದ್ದು ಜನತೆಯ ನೋವು ಆಲಿಸಲು ಸಮಯ ಎಲ್ಲಿದೆ? ಈ ಕಾಮಗಾರಿ ಕೆಲಸಗಳಿಂದ ಕೋಟ್ಯಂತರ ರೂಪಾಯಿ ಲೂಟಿ ಹೊಡೆಯಲು ಸಾಧ್ಯವಾಗುವ ಕಾರಣ ಬಡವನ ಸಂಕಷ್ಟ ಕೇಳುವ ವ್ಯವಧಾನ ಸರ್ಕಾರಕ್ಕೆ ಇಲ್ಲ.
ಸರಕಾರ ಘೋಷಣೆ ಮಾಡಿರುವ ಈ ಪ್ಯಾಕೆಜ್ ಕಣ್ಣೊರೆಸುವ ತಂತ್ರವಷ್ಟೆ! ಇದರಿಂದ ಬಡವನಿಗೆ ಹಿಂದೆಯೂ ಲಾಭ ಆಗಿರಲಿಲ್ಲ, ಮುಂದೆಯೂ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಈ ರೀತಿ ಪ್ಯಾಕೆಜ್ ಘೋಷಿಸುವ ಸರಕಾರ ತಜ್ಞರ ಮೂಲಕ ರಾಜ್ಯದ ನಿಜವಾದ ಸಮಸ್ಯೆಗಳನ್ನು ತಿಳಿದು ರೂಪಿಸಬೇಕು. ಅಲ್ಲದೇ ಈ ಹಿಂದೆ ಘೋಷಣೆ ಮಾಡಿರುವ ಪರಿಹಾರ ಧನ ಸಿಗದ ಫಲಾನುಭವಿಗಳಿಗೆ ಇಂದೇ ರಾತ್ರಿ ತಲುಪಿಸಬೇಕು ಎಂದು ಪೃಥ್ವಿ ರೆಡ್ಡಿ ಆಗ್ರಹಿಸಿದರು.