ವಿಜಯಪಥ ಸಮಗ್ರ ಸುದ್ದಿ
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನಿಂದ ಅತಿದೊಡ್ಡ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದ್ದು, ಈ ಅತಿ ದೊಡ್ಡ ಅಭಿಯಾನದಲ್ಲಿ 1.3 ಮಿಲಿಯನ್ ಸಿಬ್ಬಂದಿಗೆ ಹಾಗೂ ಅವರ ಕುಟುಂಬಸ್ಥರಿಗೆ ಲಸಿಕೆ ನೀಡಲಾಗುವುದು. ಭಾರತದ 880 ನಗರಗಳಲ್ಲಿ ಈ ಲಸಿಕಾ ಅಭಿಯಾನ ನಡೆಯಲಿದ್ದು, ಇದು ಸಂಪೂರ್ಣ ಉಚಿತವಾಗಿರಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ನಡಿ ಕೆಲಸ ಮಾಡುವ ಸಿಬ್ಬಂದಿ, ಬಿಪಿ, ಗೂಗಲ್ ಮುಂತಾದ ಪಾರ್ಟನರ್ ಸಂಸ್ಥೆಗಳ ಸಿಬ್ಬಂದಿಗೆ ಹಾಗೂ ಅವರ ಕುಟುಂಬಸ್ಥರಿಗೆ ಈ ಕೊರೊನಾ ಲಸಿಕೆ ಹಾಕಲಾಗುವುದು. ಸಿಬ್ಬಂದಿಯ ಹೆಂಡತಿ/ ಗಂಡ, ತಂದೆ-ತಾಯಿ, ಅಜ್ಜ-ಅಜ್ಜಿ, ಅತ್ತೆ-ಮಾವ, ಮಕ್ಕಳು, ಸಹೋದರ-ಸಹೋದರಿಯರು ಕೂಡ ಈ ಅಭಿಯಾನದಲ್ಲಿ ಉಚಿತವಾಗಿ ಲಸಿಕೆ ಪಡೆಯಬಹುದಾಗಿದೆ.
ಆದರೆ ಈ ಸೌಲಭ್ಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಮಾಜಿ ಉದ್ಯೋಗಿಗಳಿಗೆ ಅನ್ವಯವಾಗುವುದಿಲ್ಲ. ಯಾರೆಲ್ಲ ಪ್ರಸ್ತುತ ರಿಲಯನ್ಸ್ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೋ ಅವರಿಗೆ ಮತ್ತು ಅವರ ಕುಟುಂಬಸ್ಥರಿಗೆ ಮಾತ್ರ ಅನ್ವಯವಾಗಲಿದೆ. ಹಾಗೇ, ರಿಲಯನ್ಸ್ನಲ್ಲಿ ಕೆಲಸ ಮಾಡಿ, ನಿವೃತ್ತರಾದವರು ಮತ್ತು ಅವರ ಕುಟುಂಬಸ್ಥರು ಕೂಡ ಉಚಿತ ಕೊರೊನಾ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ.
ರಿಲಾಯನ್ಸ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಲಸಿಕೆ ವೆಚ್ಚವಷ್ಟೇ ಅಲ್ಲ ಕೊರೋನಾ ಚಿಕಿತ್ಸಾ ವೆಚ್ಚವನ್ನೂ ಭರಿಸುತ್ತಿದೆ. ರಿಲಾಯನ್ಸ್ ಇಂಡಸ್ಟ್ರೀಸ್ ಗ್ರೂಪ್ ಕಂಪನಿಗಳಲ್ಲಿ ಸುಮಾರು 6 ಲಕ್ಷ ಉದ್ಯೋಗಿಗಳಿದ್ಧಾರೆ. ಅವರ ನೋಂದಾಯಿತ ಕುಟುಂಬ ಸದಸ್ಯರ ಸಂಖ್ಯೆಯನ್ನೂ ಸೇರಿಸಿದರೆ 19 ಲಕ್ಷ ಮಂದಿಯಾಗುತ್ತಾರೆ. ಕೋವಿಡ್ ಸಾಂಕ್ರಾಮಿಕ ಕಾಲದಲ್ಲಿ ಇಷ್ಟೂ ಮಂದಿಯ ಚಿಕಿತ್ಸೆ ಮತ್ತು ಲಸಿಕಾ ವೆಚ್ಚವನ್ನು ಕಂಪನಿಯೇ ಭರಿಸುತ್ತಿದೆ.
ದೇಶದ 800ಕ್ಕೂ ಹೆಚ್ಚು ನಗರಗಳಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಪಾರ್ಟನರ್ ಆಸ್ಪತ್ರೆಗಳಾದ ಅಪೋಲೋ, ಮಾಕ್ಸ್, ಮಣಿಪಾಲ್ ಮುಂತಾದ ಆಸ್ಪತ್ರೆಗಳಲ್ಲಿ ರಿಲಯನ್ಸ್ ಸಿಬ್ಬಂದಿ ಉಚಿತ ಲಸಿಕೆಯನ್ನು ಪಡೆಯಬಹುದು. ಲಸಿಕೆಯನ್ನು ಪಡೆದ ಬಳಿಕ ಅದರ ಬಿಲ್ ನೀಡಿದರೆ ಆ ಹಣವನ್ನು ವಾಪಸ್ ನೀಡುವ ವ್ಯವಸ್ಥೆಯೂ ಇದೆ. ಇದುವರೆಗೂ ರಿಲಯನ್ಸ್ನ 3.30 ಲಕ್ಷ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.
ಜೂನ್ 15ರೊಳಗೆ ರಿಲಯನ್ಸ್ನ ಎಲ್ಲ ಸಿಬ್ಬಂದಿ ಮತ್ತು ಕುಟುಂಬದ ಸದಸ್ಯರು ಲಸಿಕೆಯ ಮೊದಲ ಡೋಸ್ ಹಾಕಿಸಿಕೊಳ್ಳಲೇಬೇಕೆಂದು ಸೂಚಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಕೊರೊನಾ ನಿಯಂತ್ರಿಸಲು ಸರ್ಕಾರದೊಂದಿಗೆ ಕೈ ಜೋಡಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಗುಜರಾತ್ನ ಜಮ್ನಾಗರ್ದಲ್ಲಿ 1,000 ಹಾಸಿಗೆಗಳುಳ್ಳ ಕೋವಿಡ್ ಕೇರ್ ಸೆಂಟರನ್ನು ತೆರೆದಿದೆ. ಈ ಕೋವಿಡ್ ಕೇರ್ ಸೆಂಟರ್ ಮೂಲಕ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಮುಂದಾಗಿದೆ. ಆಕ್ಸಿಜನ್ ಸೌಲಭ್ಯ ಸೇರಿದಂತೆ ಎಲ್ಲಾ ವೈದ್ಯಕೀಯ ವೆಚ್ಚವನ್ನು ರಿಲಯನ್ಸ್ ಸಂಸ್ಥೆಯೇ ಭರಿಸಲಿದೆ. ಇಲ್ಲಿನ ಮೆಡಿಕಲ್ ಕಾಲೇಜ್ನಲ್ಲಿ ಸದ್ಯ 400 ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ.
ಕೋವಿಡ್ ಕೇರ್ ಸೆಂಟರ್ಗೆ ಬೇಕಾದ ಮೆಡಿಕಲ್ ಉಪಕರಣಗಳು, ಅಗತ್ಯ ಔಷಧ, ಆಕ್ಸಿಜನ್ ಸಿಲಿಂಡರ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ರಿಲಯನ್ಸ್ ಸಂಸ್ಥೆ ಒದಗಿಸಿದೆ. ಗುಜರಾತ್ ಸರ್ಕಾರ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಒದಗಿಸಿದೆ. ರಾಜ್ಯ ಸರ್ಕಾರ, ರಿಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಈ ಕೋವಿಡ್ ಕೇರ್ ಸೆಂಟರ್ ಕಾರ್ಯ ನಿರ್ವಹಿಸುತ್ತಿದೆ. ಈ ಭಾಗದ ಜಾಮ್ನಗರ, ಕಬಾಲಿಯಾ, ದ್ವಾರಕ, ಪೋರಬಂದರ್ ಹಾಗೂ ಸೌರಾಷ್ಟ್ರದ ಜನರಿಗೆ ಈ ಕೋವಿಡ್ ಸೆಂಟರ್ ಆಸರೆಯಾಗಲಿದೆ.