ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸರ್ಕಾರದಿಂದ ಖರೀದಿಸಿದ ಲಸಿಕೆಯನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿ ಅದನ್ನು ₹900 ರಿಂದ ₹1200ಕ್ಕೆ ಮಾರಾಟ ಮಾಡಲಾಗುತ್ತಿದೆ. ಇದರಲ್ಲಿ ಆಡಳಿತ ಪಕ್ಷದವರು ಶಾಮೀಲಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮಾತನಾಡಿದ ಅವರು, ಈ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಮಧ್ಯ ಪ್ರವೇಶಿಸಬೇಕು. ಪ್ರಕರಣದ ಬಗ್ಗೆ ದೂರು ದಾಖಲಿಸಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದರು.
ಲಸಿಕೆ ಹಾಕಲು ಖಾಸಗಿಯವರಿಗೆ ಅವಕಾಶ ನೀಡಲಾಗಿದೆ. ಆದರೆ ಖಾಸಗಿ ಆಸ್ಪತ್ರೆಗಳು ಜನರಿಂದ ಹಣ ಲೂಟಿ ಹೊಡೆಯುತ್ತಿವೆ. ಇದಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿರುವುದು ದರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕೊರೊನಾ ಸೋಂಕಿಗೆ ಲಸಿಕೆ ನೀಡುತ್ತಿರುವ ಒಂದೊಂದು ಖಾಸಗಿ ಆಸ್ಪತ್ರೆಯಲ್ಲೂ ಲಸಿಕೆಗೆ ಒಂದೊಂದು ದರವಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಲಸಿಕೆಗಳಿಗೆ ಏಕರೂಪದ ದರ ನಿಗದಿ ಮಾಡಲೇಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆಯೇ ಸಿಗುತ್ತಿಲ್ಲ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಒಂದೊಂದು ರೀತಿ ದರವಿದೆ. 900 ರೂ.ಗಳಿಂದ 1200 ರೂ.ವರೆಗೆ ದರ ನಿಗದಿ ಮಾಡಲಾಗಿದೆ. ಹೀಗಾದರೆ ಬಡವರ ಸ್ಥಿತಿ ಏನು ಎಂದು ಪ್ರಶ್ನಿಸಿದರು. ಜತೆಗೆ ಸರ್ಕಾರಿ ಆಸ್ಪತ್ರೆಗಳಿಗೆ ಸಿಗದ ಲಸಿಕೆ ಖಾಸಗಿಯವರಿಗೆ ಹೇಗೆ ಸಿಗುತ್ತಿದೆ ಎಂದು ಖಾರವಾಗಿಯೇ ಆರೋಗ್ಯ ಸಚಿವರನ್ನು ತರಾಟೆಗೆ ತೆದುಕೊಂಡರು.
ರಾಜ್ಯಕ್ಕೆ ಒಂದು ದಿನಕ್ಕೆ 1,750 ಮೆಟ್ರಿಕ್ ಟನ್ ಆಕ್ಸಿಜನ್ ಬೇಕು. ಆದರೆ ಬರುತ್ತಿರುವುದು 1,050 ಮೆಟ್ರಿಕ್ ಟನ್ ಮಾತ್ರ. ಇನ್ನೂ 700 ಮೆಟ್ರಿಕ್ ಟನ್ ಕೊರತೆಯಿದೆ ಎಂದು ರಾಜ್ಯದಲ್ಲಿನ ಆಮ್ಲಜನಕ ಸರಬರಾಜು ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಈಗ ಬ್ಲ್ಯಾಕ್, ವೈಟ್, ಯೆಲ್ಲೋ ಫಂಗಸ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿದೆ. ನನ್ನ ಪರಿಚಿತರೊಬ್ಬರಿಗೆ ಬ್ಲ್ಯಾಕ್ ಫಂಗಸ್ ಬಂದಿದೆ. ದಿನಕ್ಕೆ ನಾಲ್ಕು ಇಂಜೆಕ್ಷನ್ ತೆಗೆದುಕೊಳ್ಳಬೇಕು. ಆ ಇಂಜೆಕ್ಷನ್ ಗಾಗಿ ನಾನು ಪರದಾಡಿದೆ. ಅಶೋಕ್, ಸುಧಾಕರ್‌ಗೂ ಫೋನ್ ಮಾಡಿದೆ. ಖಾಸಗಿ ಆಸ್ಪತ್ರೆಯವರಿಗೂ ಕಾಲ್ ಮಾಡಿದೆ. ಕೊನೆಗೆ 58 ಇಂಜೆಕ್ಷನ್ ಒದಗಿಸೋಕೆ ಪರದಾಡುವಂತಾಯಿತು. ನಾನೇ ಈ ರೀತಿ ಪರದಾಡಬೇಕಾದರೇ ಸಾಮಾನ್ಯರ ಕಥೆಯೇನು ಎಂದು ಕೇಳಿದರು.
ಕೊರೊನಾ ಮೂರನೇ ಅಲೆ ಮಕ್ಕಳಿಗೆ ಅಪಾಯಕಾರಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದರೂ ರಾಜ್ಯ ಸರ್ಕಾರ ಇನ್ನೂ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ ಎಂದು ದೂರಿದರು.
ಕೊರೊನಾ ಮೂರನೇ ಅಲೆ ಮುನ್ಸೂಚನೆ ಹಿನ್ನೆಲೆಯಲ್ಲಿ ಕೆಪಿಸಿಸಿ ಮಹಿಳಾ ಘಟಕ ಸಿದ್ಧಪಡಿಸಿರುವ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥ ಹಾಗೂ ಔಷಧಗಳನ್ನೊಳಗೊಂಡ ಕಿಟ್‌ಗಳನ್ನು ಶನಿವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ವಿತರಣೆ ಮಾಡಿದರು.