ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮೈಸೂರು ಜಿಲ್ಲೆ ಇಬ್ಬರು ಐಎಎಸ್ ಅಧಿಕಾರಿಗಳ ಜಟಾಪಟಿಗೆ ಇತಿಶ್ರೀ ಹಾಡುವ ಹಿನ್ನೆಲೆಯಲ್ಲೆಯಲ್ಲಿ ಇಬ್ಬರನ್ನೂ ವರ್ಗಾವಣೆ ಮಾಡಿದ್ದಾರೆ.
ಈ ಬೆನ್ನಲ್ಲೇ ಸಿಎಂ ನಿವಾಸ ಕಾವೇರಿಗೆ ಇಂದು (ಜೂನ್ 6) ಬೆಳ್ಳಂಬೆಳಗ್ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ತಡೆಹಿಡಿಯುವಂತೆ ಮುಖ್ಯಮಂತ್ರಿಗೆ ಕೋರಿದ್ದಾರೆ. ಇಡೀ ಪ್ರಕರಣದಲ್ಲಿ ನನ್ನಿಂದ ಯಾವುದೇ ತಪ್ಪಾಗಿಲ್ಲ ಎಂದು ಸಿಎಂಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ ರೋಹಿಣಿ, ವರ್ಗಾವಣೆ ತಡೆಹಿಡಿಯುವಂತೆ ಮನವಿ ಮಾಡಿದ್ದರು. ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೋಹಿಣಿ ಮನವಿಯನ್ನು ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ವರ್ಗಾವಣೆ ತಡೆ ಅಸಾಧ್ಯ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಮನವಿಯನ್ನು ಒಪ್ಪದ ಕಾರಣ ನಿರಾಸೆಯಿಂದ ರೋಹಿಣಿ ಸಿಂಧೂರಿ ವಾಪಸಾಗಿದ್ದಾರೆ. ಸಿಎಂ ಭೇಟಿಗೆ ಖಾಸಗಿ ಕಾರಿನಲ್ಲಿ ಆಗಮಿಸಿದ್ದ ಮೈಸೂರು ಜಿಲ್ಲಾಧಿಕಾರಿ ಸಿಂಧೂರಿ ಸುಮಾರು ಅರ್ಧ ಗಂಟೆ ಸಿಎಂ ನಿವಾಸದಲ್ಲಿ ಇದ್ದರು. ಐಎಎಸ್ ಅಧಿಕಾರಿಗಳ ಕಿತ್ತಾಟ ಹಿನ್ನೆಲೆ ಧಾರ್ಮಿಕ ದತ್ತಿ ಇಲಾಖೆಗೆ ರೋಹಿಣಿ ಸಿಂಧೂರಿಯನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಈ ನಿರ್ಧಾರ ರೋಹಿಣಿ ಸಿಂಧೂರಿ ಅವರಿಗೆ ಬೇಸರ ಉಂಟುಮಾಡಿದೆ. ಹೀಗಾಗಿ ರೋಹಿಣಿ ಇಂದು ಬೆಳ್ಳಂ ಬೆಳಗ್ಗೆಯೇ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಲು ಮುಂದಾಗಿದ್ದರು. ಸುಮಾರು ಎರಡೂವರೆ ಗಂಟೆಗಳು ಬಿಎಸ್ವೈಗಾಗಿ ಕಾದರು. ಬಳಿಕ ಭೇಟಿ ಮಾಡಿದರು.
ಆದರೂ ಸಿಎಂ ಸಿಂಧೂರಿ ಅವರ ಮನವಿಯನ್ನು ಒಪ್ಪಲಿಲ್ಲ. ಬಿಲ್ಕುಲ್ ತಡೆಯಲು ಆಗಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಹೀಗಾಗಿ ರೋಹಿಣಿ ಸಿಂಧೂರಿ ಹೋದ ದಾರಿಗೆ ಸುಂಕವಿಲ್ಲ ಎಂಬಂತೆ ಬರಿಗೈಲಿ ವಾಪಸ್ ಆಗಿದ್ದಾರೆ.