ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದ ಜನರ ಹಿತ ಕಾಪಾಡಲು ವಿಫಲವಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಒಬ್ಬ ಅಸಮರ್ಥ, ವಿಫಲ ಮುಖ್ಯಮಂತ್ರಿ. ಅವರನ್ನು ಬದಲಾವಣೆ ಮಾಡುವುದರಿಂದ ಪಾಪ ತೊಳೆದುಕೊಳ್ಳಬಹುದು ಎಂದು ಬಿಜೆಪಿ ಹೈಕಮಾಂಡ್ ತಿಳಿದುಕೊಂಡಿದೆ. ಆದರೆ ಪೂರ್ತಿ ಬಸ್ ಕೆಟ್ಟುಹೋಗಿರುವ ಕಾರಣ ಡ್ರೈವರ್ ಬದಲಾಯಿಸಿದರೆ ಏನೂ ಪ್ರಯೋಜನವಾಗದು ಎಂದು ಸುಮ್ಮನಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಬಿಜೆಪಿಗೆ ಯಡಿಯೂರಪ್ಪ ಬೇಡದ ಕೂಸಾಗಿದ್ದಾರೆ, ಕಿತ್ತುಹಾಕಲು ಹೈಕಮಾಂಡ್ ಸಿದ್ಧ ಇದೆ, ಆ ಪಕ್ಷದ ರಾಜ್ಯದ ನಾಯಕರು ಕೂಡಾ ಕೊಡವಿಕೊಳ್ಳಲು ಸಿದ್ಧ ಇದ್ದಾರೆ. ಬಿಎಸ್‌ವೈ ನಿರ್ಗಮನದ ನಂತರ ಪಕ್ಷದ ಸ್ಥಿತಿ ಏನಾಗಬಹುದೆಂಬ ಚಿಂತೆ ಅವರಿಗೆ. ಪರ್ಯಾಯ ನಾಯಕರು ಆ ಪಕ್ಷದಲ್ಲಿ ಇಲ್ಲ, ನಾಯಕತ್ವ ದಿವಾಳಿಯಾಗಿದೆ. ಅದಕ್ಕೆ ಒದ್ದಾಡುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.
ಇದರ ನಡುವೆ ಮುಖ್ಯಮಂತ್ರಿ ಅವರು ತಮ್ಮ ಸ್ಥಾನ ಉಳಿಸಿಕೊಳ್ಳಲು ಬಗೆಬಗೆಯ ಕಸರತ್ತು ನಡೆಸುತ್ತಿದ್ದಾರೆ. ಒಂದೆಡೆ ಹೈಕಮಾಂಡ್ ಹೇಳಿದ ಕೂಡಲೇ ರಾಜೀನಾಮೆ ಕೊಡ್ತೀನಿ ಅಂತಾರೆ, ಇನ್ನೊಂದೆಡೆ ತಮ್ಮ ರಾಜಕೀಯ ಕಾರ್ಯದರ್ಶಿ ಮೂಲಕ ಶಾಸಕರ ಸಹಿ ಸಂಗ್ರಹಿಸುತ್ತಿದ್ದಾರೆ. ಅವರಿಗೆ ರಾಜ್ಯದ ಚಿಂತೆ ಇಲ್ಲ, ಕುರ್ಚಿ ಉಳಿಸಿಕೊಳ್ಳುವುದೇ ಚಿಂತೆಯಾಗಿದೆ ಎಂದು ಸರಣಿ ಟ್ವೀಟ್ ಮೂಲಕ ಕಿಚ್ಚಾಯಿಸಿದ್ದಾರೆ.