ವಿಜಯಪಥ ಸಮಗ್ರ ಸುದ್ದಿ
ಹಾಸನ: ರಾಜ್ಯದ ಹಣಕಾಸು ಇತಿಮಿತಿ ನೋಡಿಕೊಂಡುಕೊರೊನಗೆ ಬಲಿಯಾದವರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ನಿರ್ಧರಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಹಾಸನದ ಶಾಸಕರು ರಾಷ್ಟ್ರೀಯ ವಿಪತ್ತು ನಿಧಿಯಿಂದ ಕೋವಿಡ್ನಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು. ಆ ವೇಳೆ ಮಾತನಾಡಿದ ಸಿಎಂ, ಪರಿಹಾರ ನೀಡುವ ಕುರಿತು ಪೂರಕವಾಗಿಯೇ ಪ್ರತಿಕ್ರಿಯೆ ನೀಡಿದರು.
ಇದೇ ವೇಳೆ ಖಾಸಗಿ ಶಾಲೆ ಆರಂಭಕ್ಕೂ ಮೊದಲೇ ಶುಲ್ಕ ಸಂಗ್ರಹ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು ಸೇರಿದಂತೆ ಎಲ್ಲಾ ಕಡೆ ಇಂತಹ ದೂರುಗಳು ಬರುತ್ತಿವೆ. ಶಾಲೆ ಆರಂಭವಾಗದೆ ಮಕ್ಕಳಿಗೆ ತೊಂದರೆ ಕೊಡಬಾರದು. ಹಾಗೆ ಮಾಡಿದವರಿಗೆ ಈಗಾಗಲೇ ನೋಟಿಸ್ ಕೊಟ್ಟಿದ್ದೇವೆ. ಇನ್ನೂ ಬಲವಂತ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಉಳಿದ 23 ತಿಂಗಳೂ ನಾನೇ ಸಿಎಂ
ಎರಡು ವರ್ಷ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘಂಟಾ ಘೋಷವಾಗಿ ಹೇಳಿದ್ದಾರೆ. ಕರ್ನಾಟಕ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರೇ ಮುಂದಿನ ಉಳಿದ ಎರಡು ವರ್ಷವೂ ಮುಂದುವರಿಯಲಿದ್ದಾರೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಿನ್ನೆಯಷ್ಟೇ ದೆಹಲಿಯಲ್ಲಿ ಸ್ಪಷ್ಟಪಡಿಸಿದ ಬಳಿಕ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಈ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನಡೆದಿದ್ದ ಚರ್ಚೆಗಳ ಬಗ್ಗೆ ಗಮನ ಸೆಳೆದಾಗ ಈ ಬಗ್ಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಈ ಅವಧಿ ಪೂರ್ಣ ಬಿಎಸ್‌ವೈ ಅವರೇ ಇರ್ತಾರೆಂದು ಹೇಳಿದ್ದಾರೆ. ಅವರೇ ಹೀಗೆ ಹೇಳಿದ ಮೇಲೆ ಈ ಪ್ರಶ್ನೆಯೇ ಉದ್ಭವ ಆಗಲ್ಲ. ನಾನು ಭರವಸೆ ಕೊಡ್ತೇನೆ ಇನ್ನೂ 2 ವರ್ಷ ನಾನೇ ಸಿಎಂ ಎಂದು ಹಾಸನದಲ್ಲಿ ಸಭೆಯ ಬಳಿಕ ಸಿಎಂ ಪ್ರಕಟಿಸಿದರು.
ಉಸ್ತುವಾರಿಯೇ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. ಅವರ ನೇತೃತ್ವದಲ್ಲಿ ಒಳ್ಳೆ ಕೆಲಸ ಆಗ್ತಿದೆ, ಆಗಬೇಕೆಂದಿದ್ದಾರೆ. ಹೀಗೆಂದು ಹೇಳಿದ ಮೇಲೆ ನನ್ನ ಜವಾಬ್ದಾರಿ ಜಾಸ್ತಿ ಆಗಿದೆ. ಮೋದಿ, ಅಮಿತ್ ಶಾ ನನ್ನ ಮೇಲೆ ಪ್ರೀತಿ ವಿಶ್ವಾಸವಿಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದರು.