ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ನಿಯಂತ್ರಣ ಮೀರಿ ಹಬ್ಬುತ್ತಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಹಾಗೂ ಸೋಂಕಿನ ಸರಪಣಿಯನ್ನು ಮುರಿಯಲು ರಾಜ್ಯ ಸರ್ಕಾರ ಅನುಸರಿಸಲು ಸೂಚಿಸಿರುವ ಕೋವಿಡ್ ನಿಯಮ ಪಾಲನೆ ಜತೆಗೆ ಬಿಎಂಟಿಸಿಯ ಕೆಲ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.
ಈ ಮಾರ್ಗಸೂಚಿಯನ್ವಯ ಅಗತ್ಯ ಇಲಾಖೆ ಹಾಗೂ ಇತರ ಸೇವೆ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರು ಸಿಬ್ಬಂದಿಗಳಿಗಾಗಿ ಮಾತ್ರ ಬಸ್ ಓಡಿಸಲಾಗುತ್ತಿದೆ. ಈ ಮಾರ್ಗ ಸೂಚಿಯು ಜೂನ್ 14ರಿಂದ ಆರಂಭವಾಗಿ ಜೂನ್ 21ರ ಬೆಳಗ್ಗೆ 6 ಗಂಟೆ ಅಥವಾ ಮುಂದಿನ ಆದೇಶದವರೆಗೆ ಮುಂದುವರಿಯಲಿದೆ.
ಅವುಗಳಲ್ಲಿ ಪ್ರಮುಖವಾಗಿ ಆರೋಗ್ಯ ಸೇವೆ ಸೇರಿದಂತೆ ಅಗತ್ಯ ಇಲಾಖೆ ಹಾಗೂ ಇತರ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗಾಗಿ ಮಾತ್ರ ಬಸ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮುಂದುವರಿದು ಅಗತ್ಯ ಸೇವಾ ಸಿಬ್ಬಂದಿಗಳಿಂದ ಇನ್ನಷ್ಟು ಬಸ್ ಕಾರ್ಯಾಚರಣಗೆ ಬೇಡಿಕೆ ಬಂದಲ್ಲಿ ಅಗತ್ಯಕ್ಕನುಗುಣವಾಗಿ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಿಸಲಾಗುವುದು ಎಂದು ತಿಳಿಸಿದ್ದಾರೆ.
ಸರ್ಕಾರದ ಮಾರ್ಗಸೂಚಿಯನ್ವಯ ಕೆಳಕಂಡ ಮಾನದಂಡಗಳನ್ನು ಪಾಲಿಸಬೇಕು
ಬಸ್‌ಗಳಲ್ಲಿ ಪ್ರಯಾಣಿಸಲು ಅನುಮತಿಸಲಾದ ಸಿಬ್ಬಂದಿ ವರ್ಗ. ಸರ್ಕಾರಿ, ಅರೆ ಸರ್ಕಾರಿ ಅಧಿಕಾರಿ, ನೌಕರರ ಸಿಬ್ಬಂದಿ, ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ನರ್ಸ್, ಅಧಿಕಾರಿಗಳು, ನೌಕರರು, ವೈದ್ಯಕೀಯ ತಂತ್ರಜ್ಞರು, ಪ್ರಯೋಗಾಲಯ ಸಿಬ್ಬಂದಿ, ಪ್ಯಾರಾಮೆಡಿಕಲ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಇತ್ಯಾದಿ.
ಆರೋಗ್ಯ, ಪೊಲೀಸ್, ಗೃಹ ರಕ್ಷಕ ದಳ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ, ಬಿಬಿಎಂಪಿ, ಬೆಸ್ಕಾಂ ಹಾಗೂ ಬಿಡಬ್ಲ್ಯೂಎಸ್ಎಸ್ಬಿ ಸಿಬ್ಬಂದಿ. ಜತೆಗೆ ರೋಗಿಗಳು ಹಾಗೂ ಅವರ ಸಹಾಯಕರು. ಈ ಎಲ್ಲಾ ಇಲಾಖೆಯ ಸಿಬ್ಬಂದಿ ಬಸ್‌ನಲ್ಲಿ ಸಂಚರಿಸಲು ಅವಕಾಶವಿದ್ದು ಎಲ್ಲರೂ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಹೊಂದಿರಬೇಕು ಹಾಗೂ ರೋಗಿಗಳು ವೈದ್ಯಕೀಯ ದಾಖಲೆ, ರೋಗಿಗಳ ಸ್ಥಿತಿಗತಿ ಆಧಾರದ ಮೇಲೆ ಪ್ರಯಾಣಿಸಲು ಅವಕಾಶವಿದೆ.
ಇನ್ನು ಸಾರಿಗೆ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಪರಿಶೀಲಿಸಿ ಬಸ್‌ನಲ್ಲಿ ಪ್ರಯಾಣಿಸಲು ಅನುಮತಿಸಬೇಕು. ಸಾರಿಗೆಗಳಲ್ಲಿ ಅನುಮತಿಸಲಾದ ಪ್ರಯಾಣಿಕರನ್ನು ಹೊರತುಪಡಿಸಿ ಇತರೆ ಸಾರ್ವಜನಿಕರು ಪ್ರಯಾಣಿಸಲು ಅವಕಾಶವಿರುಲ್ಲ.
ಬಸ್ ಪಾಸ್ ಹೊಂದಿರದ ಪ್ರಯಾಣಿಕರಿಗೆ ಇಟಿಎಂ ಮೂಲಕ ಟಿಕೆಟ್ ವಿತರಿಸುವುದು. ಇನ್ನು ನೆರೆ ಜಿಲ್ಲೆ- ಪ್ರದೇಶಗಳಿಗೆ ಸರಕಾರ/ ಜಿಲ್ಲಾಡಳಿತ ನೀಡುವ ನಿರ್ದೇಶನಗಳನ್ನು ಗಮನದಲ್ಲಿರಿಸಿಕೊಂಡು ಸಾರಿಗೆಗಳ ಕಾರ್ಯಾಚರಣೆಗೆ ಅವಶ್ಯ ಕ್ರಮ ವಹಿಸಬೇಕಿದೆ.
ಕರ್ತವ್ಯ ನಿರ್ವಹಿಸುವಾಗ ಚಾಲನಾ ಸಿಬ್ಬಂದಿಗಳು ಫೇಸ್ ಮಾಸ್ಕ್ ಕಡ್ಡಾಯವಾಗಿ ಧರಿಸುವುದು. ಚಾಲನಾ ಸಿಬ್ಬಂದಿಗಳು ಸ್ಯಾನಿಟೈಸರ್ ಬಳಸಿ ಶುಚಿತ್ವ ಕಾಪಾಡುವುದು. ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿಸಾಲಿನಲ್ಲಿ ಬಸ್ ಹತ್ತಲು ಮತ್ತು ಇಳಿಯಲು ಸಿಬ್ಬಂದಿಗಳು ಪ್ರಯಾಣಿಕರಿಗೆ ಸೂಕ್ತ ತಿಳಿವಳಿಕೆ ನೀಡುವುದು. ಮಾಸ್ಕ್ ಧರಿಸಿದ ಪ್ರಯಾಣಿಕರನ್ನು ಬಸ್ಸಿನಲ್ಲಿ ಪ್ರಯಾಣಿಸಲು ಯಾವುದೇ ಕಾರಣಕ್ಕೂ ಅವಕಾಶ ಕಲ್ಪಿಸಬಾರದು ಎಂದು ತಿಳಿಸಿದ್ದಾರೆ.
ಇನ್ನು ನಿರ್ವಾಹಕರ ಮಾರ್ಗ ಪತ್ರಗಳಲ್ಲಿ ಸುತ್ತುವಳಿವಾರು ಸಾರಿಗೆ ಆದಾಯ ಮತ್ತು ಪ್ರಯಾಣಿಕರ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವಂತೆ ನಿರ್ವಾಹಕರಿಗೆ ಸೂಚಿಸುವುದು. ಈ ಎಲ್ಲದರ ಜತೆಗೆ ಕೋವಿಡ್-19 ನಿಯಮಗಳನ್ನು ಪಾಲಿಸಬೇಕು ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.