ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೇಂದ್ರ ಸರಕಾರ ರಿಸರ್ವ್ ಬ್ಯಾಂಕ್ನ ಡಿವಿಡೆಂಡ್ ನಿಧಿಯನ್ನು ಅಕ್ರಮವಾಗಿ ಬಳಸಿಕೊಂಡು ವಿವಿಧ ಬ್ಯಾಂಕ್ ಗಳ ಶೇರ್ ಹೋಲ್ಡರ್ ಗಳಿಗೆ ಲಾಭವನ್ನು ನೀಡದೆ ಮೋಸ ಮಾಡಿದೆ. ಶೇರ್ ಹೋಲ್ಡರ್ ಗಳು ತಮ್ಮ ಶೇರ್ ಅನ್ನು ವಾಪಸ್ ತೆಗೊಂಡಲ್ಲಿ ಸಹಕಾರಿ ಬ್ಯಾಂಕ್ ಗಳು ಮುಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತಕ್ಷಣ ಎಲ್ಲಾ ಬ್ಯಾಂಕ್ ಗಳು ಲಾಭಾಂಶವನ್ನು ಎಲ್ಲಾರಿಗೂ ವಿತರಿಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಆಗ್ರಹಿಸಿದರು.
ನಗರದ ಆಮ್ ಆದ್ಮಿ ಪಾರ್ಟಿಯ ಮಾಧ್ಯಮ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಸಹಕಾರಿ ತತ್ವಗಳ ಮೇಲೆ ನಂಬಿಕೆ ಇಲ್ಲ. ಸಹಕಾರಿ ಮತ್ತು ಕೋ- ಆಪರೇಟಿವ್ ಬ್ಯಾಂಕ್ ಗಳನ್ನು ಮುಚ್ಚಿಸಲು ಹೊರಟಿದೆ. ರಿಸರ್ವ್ ಬ್ಯಾಂಕ್ ನಿಂದ 99,122 ಕೋಟಿ ರೂ. ಡಿವಿಡೆಂಡ್ ನಿಧಿಯನ್ನು ಕಸಿದುಕೊಂಡಿದೆ. ಬ್ಯಾಂಕ್ ಗಳಿಂದ ಟ್ಯಾಕ್ಸ್ ಕಟ್ಟಿಸಿಕೊಂಡು ಬ್ಯಾಂಕ್ ಗಳ ಲಾಭಾಂಶಗಳನ್ನು ತೆಗೆದುಕೊಂಡಿದೆ. ಬ್ಯಾಂಕ್ ಗಳಿಂದ ಇಷ್ಟೆಲ್ಲಾ ಪಡೆದು ಶೇರ್ ಹೋಲ್ಡರ್ ಗಳಿಗೆ ಏನೇನೂ ನೀಡದೆ ಕೇಂದ್ರ ಮೋಸ ಮಾಡಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಸುಮಾರು 261 ಹಾಗೂ ದೇಶದಲ್ಲಿ 1,481 ಸಹಕಾರಿ ಬ್ಯಾಂಕ್ ಗಳು ಇವೆ. ಇವೆಲ್ಲವೂ ಜನಸಾಮಾನ್ಯನ ಬದುಕಿನ ಅಂಗಗಳಾಗಿವೆ. ರಾಜ್ಯ ಸರಕಾರ ಕೂಡ ಇವುಗಳನ್ನು ಹತ್ತಿಕ್ಕುವ ಕೇಂದ್ರದ ನಡೆಗೆ ಬೆಂಬಲವೆಂಬಂತೆ ಮೌನವಾಗಿದೆ. ಕರ್ನಾಟಕ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್ ಅವರು ಹುಟ್ಟಿದ ನಾಡು. ಅಲ್ಲದೇ ಸಹಕಾರ ರತ್ನ ಬಿರುದನ್ನು ಪಡೆದಿರುವ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಕೂಡ ಈ ಬಗ್ಗೆ ಮೌನವಾಗಿದ್ದಾರೆ. ಸಹಕಾರಿ ಧುರೀಣ ಎಚ್.ಕೆ. ಪಾಟೀಲ್ ಕೂಡ ಈ ಬಗ್ಗೆ ಚಕಾರ ಎತ್ತಿಲ್ಲ. ಇದರಿಂದ ಸಾವಿರಾರು ಶೇರ್ ಹೋಲ್ಡರ್ ಗಳಿಗೆ ಮೋಸವಾಗಲಿದೆ. ಸಹಕಾರಿ ಬ್ಯಾಂಕ್ ಗಳು ನೆಲಕ್ಕಚ್ಚಲಿವೆ ಎಂದರು.
ರಾಜ್ಯದ ಸಹಕಾರಿ ಸಚಿವರು ತಕ್ಷಣ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಲಾಭವನ್ನು ಹೊಂದಿರುವ ಬ್ಯಾಂಕ್ ಗಳು ಅವುಗಳ ಶೇರ್ ಹೋಲ್ಡರ್ ಗಳಿಗೆ ಅವರ ಡಿವಿಡೆಂಡ್ ತಲುಪುವಂತೆ ಮಾಡಬೇಕು. ಈ ಮೂಲಕ ಸಹಕಾರಿ ಬ್ಯಾಂಕ್ ಗಳನ್ನು ಉಳಿಸಬೇಕು ಎಂದು ನಂಜಪ್ಪ ಕಾಳೇಗೌಡ ಒತ್ತಾಯಿಸಿದರು.