ವಿಜಯಪಥ ಸಮಗ್ರ ಸುದ್ದಿ
ಚಿಕ್ಕಮಗಳೂರು: ಭಾರತೀಯ ಹವಾಮಾನ ಇಲಾಖೆ ಹಾಗೂ ರಾಜ್ಯ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯ ಪ್ರಕಾರ ಜೂನ್ 19 ರಿಂದ 21 ವರೆಗೆ ಜಿಲ್ಲೆಗೆ ಬಾರಿ ಮಳೆಯಾಗುವ ಸಂಭವವಿದೆ ಅದೇ ರೀತಿ ಸರಾಸರಿ ಗಾಳಿಯ ವೇಗವು 14 ಕಿ.ಮೀ/ ಗಂಟೆಗೆ ರಿಂದ 16 ಕಿ.ಮೀ ಇರುವ ಹಾಗೂ ಬಹುತೇಕ ಮೋಡಕವಿದ ವಾತವರಣ ಇರುವ ಸಂಭವವಿದೆ ಎಂದು ಜಿಲ್ಲಾ ಕೃಷಿ ಹವಾಮಾನ ಘಟಕದ ಸಂಪರ್ಕ ಅಧಿಕಾರಿ ಡಾ. ಎ.ಟಿ.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮುನ್ಸೂಚನೆಯ ಪ್ರಕಾರ ಗರಿಷ್ಠ ತಾಪಮಾನವು ಮುಂದಿನ ಮೂರು ದಿನಗಳಲ್ಲಿ ಸರಿಸುಮಾರು 1-1.8 ಡಿಗ್ರಿಯಷ್ಟು ಇಳಿಕೆಯಾಗುವ ಸಂಭವವಿದೆ ಮತ್ತು ಕನಿಷ್ಠ ತಾಪಮಾನದ ವಿಸ್ತೃತ ಮುನ್ಸೂಚನೆಯನ್ನು ಗಮನಿಸಿದಾಗ ವಾಡಿಕೆಯಷ್ಟು ಇರುವ ಸಂಭವವಿದೆ ಎಂದು ಜಿಲ್ಲಾ ಕೃಷಿ ಹವಾಮಾನ ಘಟಕದ ವಿಷಯ ತಜ್ಞರಾದ ಪ್ರವೀಣ್ ಕೆ.ಎಂ. ತಿಳಿಸಿದರು.
ರೈತರು ಮೇಲೆ ಹೇಳಿದ ಮುನ್ಸೂಚನೆಯ ಆಧಾರದ ಮೇಲೆ ತಮ್ಮ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳನ್ನು ಆಯೋಜಿಸಿಕೊಳ್ಳಬೇಕು. ಭತ್ತದ ಸಸಿಮಡಿ ಮಾಡಿರುವ ರೈತರು ಹೆಚ್ಚು ಮಳೆಯಾಗುತ್ತಿರುವ ಕಾರಣದಿಂದ ಸಸಿಮಡಿಯಲ್ಲಿ ಅತಿ ಹೆಚ್ಚು ನೀರು ನಿಲ್ಲದಂತೆ ಜಾಗೃತಿ ವಹಿಸಬೇಕು. ಇನ್ನಿತರ ಕ್ಷೇತ್ರ ಬೆಳೆಗಳಾದ ಶೇಂಗಾ, ಈರುಳ್ಳಿ, ಶುಂಠಿ, ಆಲೂಗಡ್ಡೆ ಬೆಳೆಗಳಲ್ಲಿ ಮಳೆನೀರು ನಿಲ್ಲದಂತೆ ಕ್ರಮವಹಿಸಬೇಕು.
ಮಲೆನಾಡಿನ ಭಾಗಗಳಲ್ಲಿ ರೈತರು ಅಡಿಕೆ, ಕಾಫಿ ಮತ್ತು ಕಾಳು ಮೆಣಸು ಬೆಳೆಗಳಿಗೆ ಬೋರ್ಡೋ ದ್ರಾವಣ ಸಿಂಪಡಿಸುವುದನ್ನು ಹಾಗೂ ಬೆಳೆಗಳಿಗೆ ಗೊಬ್ಬರ ನೀಡುವುದನ್ನು3 ದಿನಗಳ ಕಾಲ ಮುಂದೂಡುವುದು ಸೂಕ್ತ. ಮಳೆ ನೀರು ಪೋಲಾಗಲು ಬಿಡದೆ ಕೃಷಿಹೊಂಡಗಳಲ್ಲಿ ಶೇಖರಿಸಬೇಕು. ಕೊಳವೆ ಬಾವಿಯ ಸುತ್ತಲಿನ ಪ್ರದೇಶಗಳಲ್ಲಿ ನೀರು ಇಂಗುವ ವ್ಯವಸ್ಥೆ ಮಾಡಬೇಕು.
ಹೆಚ್ಚಿನ ಮಾಹಿತಿಗಾಗಿ ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ದೂ.ಸಂ: 9632894144, 9480838203 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಎ.ಟಿ ಕೃಷ್ಣಮೂರ್ತಿ ತಿಳಿಸಿದ್ದಾರೆ.