NEWSನಮ್ಮರಾಜ್ಯ

ಬಿಜೆಪಿ ಸರ್ಕಾರ ಆಂತರಿಕ ಕಲಹದಿಂದ ಶರಶಯ್ಯೆಯಲ್ಲಿದೆ: ಎಚ್‌ಡಿಕೆ

ಸರ್ಕಾರವನ್ನೇ ನಡೆಸಲಾಗದೇ ನಲುಗಿ ಹೋಗಿರುವ ಬಿಜೆಪಿಗೆ ಇನ್ನು ನೆಲ–ಜಲ, ಭಾಷೆ ಬಗ್ಗೆ ಅಕ್ಕರೆ ಇದ್ದೀತೆ

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ತಮಿಳುನಾಡು ಸರ್ಕಾರ ಮೇಕೆದಾಟು ಜಲಾಶಯ–ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಪ್ರತಿಕೂಲವಾಗುವಂಥ ಹೆಜ್ಜೆ ಇಟ್ಟಿದೆ. ಇದರ ಬಗ್ಗೆ ಗಮನಹರಿಸಬೇಕಿದ್ದ ರಾಜ್ಯದ ಬಿಜೆಪಿ ಸರ್ಕಾರ ಆಂತರಿಕ ಕಲಹದಿಂದ ಶರಶಯ್ಯೆಯಲ್ಲಿದೆ. ಸರ್ಕಾರವನ್ನೇ ನಡೆಸಲಾಗದೇ ನಲುಗಿ ಹೋಗಿರುವ ಬಿಜೆಪಿಗೆ ಇನ್ನು ನೆಲ–ಜಲ, ಭಾಷೆ–ನುಡಿಯ ಬಗ್ಗೆ ಅಕ್ಕರೆ ಇದ್ದೀತೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಈ ಕುರಿತು ಶುಕ್ರವಾರ ಮಾತನಾಡಿರುವ ಅವರು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವ ತಮಿಳುನಾಡು ಸಿಎಂ ಅವರು ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಅನುಮತಿ ನೀಡದಂತೆಯೂ, ಈ ವರ್ಷ ತಮಿಳುನಾಡಿಗೆ ಸಿಗಬೇಕಾದ ನೀರಿನ ವಿಚಾರದಲ್ಲಿ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಿದ್ದಾರೆ. ಈ ಬಗ್ಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಬೇಕಿದ್ದ ಆಡಳಿತಾರೂಢ ಬಿಜೆಪಿ ಮೈಮರೆತು ಕುಳಿತಿದೆ ಎಂದು ಅಸಮಾಧಾನ ಹೊರಹಕಿದರು.

ಮೇಕೆದಾಟು ಅಣೆಕಟ್ಟು ಯೋಜನೆ ರೂಪಿಸಲೂ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಆಗಿರಲಿಲ್ಲ. ನನ್ನ ಸರ್ಕಾರ ಅದನ್ನು ಜಾರಿಗೆ ತಂದು ಧೈರ್ಯ ತೋರಿತು. ಆದರೆ, ಅದನ್ನು ಉಳಿಸಿಕೊಳ್ಳಲೂ ಬಿಜೆಪಿಗೆ ಆಗುತ್ತಿಲ್ಲ. ರಾಜ್ಯ–ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ ಯೋಜನೆ ಅನಿಶ್ಚಿತತೆ ಎದುರಿಸುತ್ತಿದೆ. ಸ್ವರ್ಗ ಸೃಷ್ಟಿಸುವ ಬಿಜೆಪಿ ಮಾತು ಸುಳ್ಳಾಗಿದೆ ಎಂದು ಹೇಳಿದರು.

ರಾಜ್ಯದ ಜನ ಗಮನಿಸಬೇಕು. ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವುದು ಪ್ರಾದೇಶಿಕ ಪಕ್ಷ. ಪ್ರಾದೇಶಿಕತೆ, ಅಸ್ಮಿತೆ ವಿಚಾರದಲ್ಲಿ ತಮಿಳುನಾಡು ಪ್ರಬಲವಾಗಿದೆ. ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳೇ ಹೆಚ್ಚು ಅಧಿಕಾರದಲ್ಲಿದ್ದರೂ ರಾಜ್ಯದ ಅಸ್ಮಿತೆ, ಪ್ರಾದೇಶಿಕತೆ ರಕ್ಷಣೆ ಸಾಧ್ಯವಾಗುತ್ತಿಲ್ಲ. ರಾಜ್ಯದ ಹಿತರಕ್ಷಣೆಗೆ ಪ್ರಾದೇಶಿಕ ಪಕ್ಷವೇ ಅಗತ್ಯ ಎಂದರು.

ಸ್ಟಾಲಿನ್‌ ಒಂದು ಮಾತು ಹೇಳಿದ್ದರು. ಸಂವಿಧಾನದ 8ನೇ ಪರಿಚ್ಛೇದದಡಿ ಮಾನ್ಯತೆ ನೀಡಲಾಗಿರುವ ಎಲ್ಲ ಭಾಷೆಗಳಿಗೆ ಅಧಿಕೃತ ಭಾಷೆ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದ್ದರು. ಈ ಪ್ರಯತ್ನದಲ್ಲಿ ನಾನೂ ಕೈಜೋಡಿಸುತ್ತೇನೆ. ಆದರೆ, ಅಣ್ಣತಮ್ಮಂದಿರಂತೆ ಇರಬೇಕಾದ ನಾವು ಕಾವೇರಿ ವಿಚಾರದಲ್ಲಿ ಕಲಹಕ್ಕಿಳಿಯುವುದರಲ್ಲಿ ಲಾಭವಿಲ್ಲ ಎಂದು ತಿಳಿಸಿದರು.

ದಕ್ಷಿಣ ಭಾರತದ ರಾಜ್ಯಗಳು, ಭಾಷೆ, ಸಂಸ್ಕೃತಿ ವಿಚಾರದಲ್ಲಿ ಈಗಿನ ಕೇಂದ್ರ ಸರ್ಕಾರ ಅತ್ಯಂತ ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಿದೆ. ಇಂಥ ಹೊತ್ತಿನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಕಾವೇರಿ ವಿಚಾರದ ಮೂಲಕ ಒಡೆದುಹೋಗಬಾರದು. ನಮ್ಮ ಅಸ್ಮಿತೆಗಳ ರಕ್ಷಣೆಗಾಗಿ ನಾವು ಈಗ ಒಗ್ಗಟ್ಟಿನಿಂದ ಇರಬೇಕಾದ ಕಾಲ ಎಂಬುದನ್ನು ಸ್ಟಾಲಿನ್‌ ಗಮನಿಸಬೇಕು ಎಂದು ತಿಳಿಸಿದರು.

ತಮಿಳುನಾಡು ಸರ್ಕಾರ ಮೇಕೆದಾಟು ಜಲಾಶಯವನ್ನು ಆಗಲು ಬಿಡಲಿ. ಇದರಿಂದ ತಮಿಳುನಾಡಿಗೆ ಯಾವ ತೊಂದರೆಯೂ ಇಲ್ಲ ಎಂಬುದನ್ನು ಈಗಾಗಲೇ ವಿವರಿಸಲಾಗಿದೆ. ಇದು ನೀರಾವರಿ ಉದ್ದೇಶದ ಯೋಜನೆಯಲ್ಲ. ಬದಲಿಗೆ ಕುಡಿಯುವ ನೀರಿನ ಉದ್ದೇಶದ ಯೋಜನೆಯಾಗಿದೆ. ಈ ವಿಚಾರವನ್ನು ಸ್ಟಾಲಿನ್‌ ಅವರು ಗಮನಿಸಬೇಕು. ಜಲಾಶಯದ ವಿಚಾರದಲ್ಲಿ ಕರ್ನಾಟಕದೊಂದಿಗೆ ಸಹಕರಿಸಬೇಕು ಎಂದು ಹೇಳಿದರು.

ಕಳೆದ ಮೂರ್ನಾಲ್ಕು ವರ್ಷಗಳಿಂದ ಕರ್ನಾಟಕ ತಮಿಳುನಾಡಿಗೆ ನಿಗದಿಗಿಂತಲೂ ಹೆಚ್ಚಿನ ಪ್ರಮಾಣದ ನೀರು ಕೊಟ್ಟಿದೆ. ಪಕೃತಿ ಸಹಕರಿಸಿದಾಗ ಹೆಚ್ಚಿನ ನೀರನ್ನು ಹರಿಸಿದೆ. ಬರಗಾಲದಂಥ ಸಂದರ್ಭದಲ್ಲೂ ಕರ್ನಾಟಕವು ತಮಿಳುನಾಡಿಗೆ ಎಂದೂ ದ್ರೋಹ ಬಗೆದಿಲ್ಲ. ಹೀಗಾಗಿ ನೀರಿನ ಹಂಚಿಕೆ ವಿಚಾರದಲ್ಲಿ ಸೋದರ ಸ್ಟಾಲಿನ್ ಅವರಿಗೆ ಯಾವ ಅನುಮಾನಗಳೂ, ಆತಂಕಗಳೂ ಬೇಡ.

ತಮಿಳುನಾಡು ರೈತರನ್ನು ವಂಚಿಸಿ ಕರ್ನಾಟಕ ತನ್ನ ರೈತರನ್ನು ರಕ್ಷಿಸಿದ ಉದಾಹರಣೆ ಇಲ್ಲ. ರೈತರೆಂದರೆ ರೈತರೇ, ಭೂಮಿತಾಯಿಯ ಮಕ್ಕಳು. ನಮ್ಮ ಅಣ್ಣ ತಮ್ಮಂದಿರು. ಕಾವೇರಿ ವಿಚಾರದಲ್ಲಿ ಈಗ ನಾವಿಬ್ಬರು.. ಅಂದರೆ ರಾಜಕಾರಣಿಗಳೂ ಅಣ್ಣತಮ್ಮಂದಿರಾಗೋಣ. ಸೋದರ ಭಾವನೆಯೊಂದಿಗೆ ಸ್ಟಾಲಿನ್ ಒಂದು ಹೆಜ್ಜೆ ಮುಂದೆ ಬಂದರೆ ನಾನಂತೂ ಎರಡು ಹೆಜ್ಜೆ ಮುಂದಿಡುವೆ ಎಂದರು.

ಕಾವೇರಿಗಾಗಿ ಎರಡೂ ರಾಜ್ಯಗಳು ಕಲಹಕ್ಕಿಳಿದಿದ್ದು ಸಾಕು. ದಕ್ಷಿಣ ಭಾರತೀಯರಾಗಿ ಈಗ ನಾವು ಕಲಹ ಮಾಡುವ ಸಂದರ್ಭವಿಲ್ಲ. ಸೋದರತೆ ಮೂಲಕ ಇದನ್ನು ಬಗೆಹರಿಸಿಕೊಳ್ಳಬೇಕು. ಈ ಮೂಲಕ ನಾವು ಒಗ್ಗಟ್ಟಾಗೇ ಉಳಿಯಬೇಕು. ಸ್ಟಾಲಿನ್ ಅವರ ಅಧಿಕಾರವಧಿಯಲ್ಲಿ ಈ ಪ್ರಯತ್ನ ಆಗಲಿ. ಅದಕ್ಕೆ ನನ್ನ ಬೆಂಬಲ ಇರಲಿದೆ. ಈ ರಾಜ್ಯಗಳ ಸೋದರತೆ ರಕ್ಷಣೆ ಈಗಿನ ಅಗತ್ಯ ಎಂದು ಹೇಳಿದರು.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...