ಚಿತ್ರದುರ್ಗ: ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.5ಕ್ಕಿಂತ ಕಡಿಮೆಯಾಗದ ಹಿನ್ನೆಲೆಯಲ್ಲಿ ಸದ್ಯ ಜಾರಿಯಲ್ಲಿರುವ ಲಾಕ್‍ಡೌನ್ ಜುಲೈ 5 ರವರೆಗೆ ಯಥಾಸ್ಥಿತಿ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.
ಕೆಲವು ಜಿಲ್ಲೆಗಳ ಲಾಕ್‍ಡೌನ್‍ನಲ್ಲಿ ವಿನಾಯಿತಿ ನೀಡಿ ಸರ್ಕಾರ ಜೂನ್ 19ರಂದು ಆದೇಶ ನೀಡಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಜೂನ್ 11ರಂದು ಹೊರಡಿಸಿದ ಮಾರ್ಗಸೂಚಿ ಯಥಾಸ್ಥಿತಿ ಮುಂದುವರಿಯಲಿದ್ದು, ಈ ಅವಧಿಯಲ್ಲಿ ಅಗತ್ಯ ವಸ್ತುಗಳ ಅಂಗಡಿಗಳು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ತೆರೆಯಲಿವೆ ಎಂದು ತಿಳಿಸಿದ್ದಾರೆ.
ಸರ್ಕಾರ ಜೂನ್ 19ರಂದು ರಾಜ್ಯ ವ್ಯಾಪ್ತಿ ಜಿಲ್ಲೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿ ವಿನಾಯಿತಿಗಳನ್ನು ನೀಡಿದೆ. ಅದರಂತೆ ಚಿತ್ರದುರ್ಗ ಜಿಲ್ಲೆಯು ಎರಡನೇ ವರ್ಗದಲ್ಲಿ ಇದ್ದು, ಸರ್ಕಾರದ ಮೇ 7ರ ಆದೇಶ ಹಾಗೂ ನಂತರದ ಸೇರ್ಪಡೆ ಆದೇಶಗಳಲ್ಲಿ ಸ್ಪಷ್ಟಪಡಿಸಲಾಗಿರುವ ವಲಯಗಳಿಗೆ ನೀಡಲಾಗಿರುವ ವಿನಾಯಿತಿಗಳ ಜೊತೆಯಲ್ಲಿ ಸರ್ಕಾರದ ಹೊಸ ಮಾರ್ಗಸೂಚಿಗಳಲ್ಲಿ ಸೂಚಿಸಲಾಗಿರುವ ಚಟುವಟಿಕೆಗಳಿಗೆ ವಿನಾಯಿತಿಯನ್ನು ನೀಡಿದ್ದು, ಈ ಆದೇಶವು ಚಿತ್ರದುರ್ಗ ಜಿಲ್ಲೆಯಾದ್ಯಂತ ಜೂನ್ 21ರ ಮುಂಜಾನೆ 6 ರಿಂದ ಜುಲೈ 5ರ ಮುಂಜಾನೆ 5 ರವರೆಗೆ ಜಾರಿಗೆ ಬರುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಸರ್ಕಾರದ ಪರಿಷ್ಕೃತ ಮಾರ್ಗಸೂಚಿಯಂತೆ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರದ ಆದೇಶದಲ್ಲಿ ವಿನಾಯಿತಿ ನೀಡಿರುವ ಚಟುವಟಿಕೆಗಳಿಗೆ ನಿಗದಿತ ಅವಧಿಯಾದ ಮುಂಜಾನೆ 6 ರಿಂದ ಮಧ್ಯಾಹ್ನ 2 ರವರೆಗೆ ಕೋವಿಡ್-19 ನಿಯಮಾಳಿಗಳನ್ನು ಪಾಲಿಸಿಕೊಂಡು ನಿರ್ವಹಿಸಲು ಅನುಮತಿ ನೀಡಲಾಗಿದೆ.
ಪ್ರತಿ ದಿನ ಸಂಜೆ 7 ರಿಂದ ಮರು ದಿನ ಮುಂಜಾನೆ 5 ರವರೆಗೆ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯಕ್ಕೆ ಸಂಜೆ 7 ರಿಂದ ಸೋಮವಾರ ಮುಂಜಾನೆ 5 ರ ವರೆಗೆ ಅತ್ಯಾವಶ್ಯಕ ಸೇವೆಗಳನ್ನು ಬೆಳಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ನಿರ್ವಹಿಸಲು ಅನುಮತಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಸರ್ಕಾರದ ಮಾರ್ಗಸೂಚಿಯಲ್ಲಿ ಪ್ರಸ್ತಾಪಿಸಿರುವ ವಿವಿಧ ವಲಯವಾರು ಚಟುವಟಿಕೆಗಳ ನಿರ್ಬಂಧಗಳ ಬಗ್ಗೆ ಆದೇಶವನ್ನು ಪರಿಣಾಮಕಾರಿ ಜಾರಿಗೊಳಿಸಿ, ನಿಯಮಿತವಾಗಿ ಪರಿಸ್ಥಿತಿಯನ್ನು ಅವಲೋಕಿಸಿ ಕ್ರಮಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯ ಜಿಲ್ಲಾ ಮುಖ್ಯಸ್ಥರಿಗೆ ಸೂಚಿಸಿದೆ ಎಂದು ಜಿಲ್ಲಾಧಿಕಾರಿ ಕವಿತಾ ತಿಳಿಸಿದ್ದಾರೆ.
ಬೆಳಗ್ಗೆ 5 ರಿಂದ 10 ರವರೆಗೆ ವಾಕ್ ಮತ್ತು ಜಾಗಿಂಗ್
ಉದ್ಯಾನ ವನಗಳಲ್ಲಿ ಬೆಳಗ್ಗೆ 5 ರಿಂದ 10 ರವರೆಗೆ ವಾಕ್ ಮತ್ತು ಜಾಗಿಂಗ್ ಮಾಡಬಹುದು. ದಿನದ 24 ಗಂಟೆಯು ಎಲ್ಲ ಬಗೆಯ ವಸ್ತುಗಳನ್ನು ಮನೆಗಳಿಗೆ ಪೂರೈಕೆ ಮಾಡುವ ಹೋಂ ಡೆಲಿವರಿಗೆ ಅವಕಾಶ ನೀಡಲಾಗಿದೆ.
ಬಾರ್, ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗೆ ಅವಕಾಶ, ಮದ್ಯ ಮಳಿಗೆಗಳು ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಬಹುದು. ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಕನ್ನಡಕದ ಅಂಗಡಿಗಳಿಗೂ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಲು ಅವಕಾಶ ನೀಡಲಾಗಿದೆ.
ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ, ಕೃಷಿ ಇಲಾಖೆ ಮತ್ತು ಸಂಬಂಧಿತ ಕಚೇರಿಗಳು, ಲೋಕೋಪಯೋಗಿ ಇಲಾಖೆ, ವಸತಿ, ಸಹಕಾರ, ಕಂದಾಯ, ನಬಾರ್ಡ್ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದ್ದಾರೆ.