ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗುತ್ತಿರುವುದರಿಂದ ಒಂದು ತಿಂಗಳಿಗೂ ಹೆಚ್ಚು ಕಾಲ ಕರ್ನಾಟಕದಲ್ಲಿ ಜಾರಿಯಲಿದ್ದ ಲಾಕ್ಡೌನ್, ಜೂನ್ 20ರ ನಂತರ ಅಂದರೆ ಇಂದಿನಿಂದ ರಾಜ್ಯದ ರಾಜಧಾನಿಯಲ್ಲಿ ಸಾರಿಗೆ ಬಸ್ ಸಂಚಾರ ಆರಂಭವಾಗಿದ್ದು, ಬೆಳಗ್ಗೆ 8 ಗಂಟೆ ಸುಮಾರಿಗೆ 796 ಬಿಎಂಟಿಸಿ ಬಸ್‌ಗಳು ಸಂಚಾರ ಆರಂಭಿಸಿವೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಒಟ್ಟಾರೆ 2 ಸಾವಿರ ಬಿಎಂಟಿಸಿ ಬಸ್‌ಗಳ ಸಂಚಾರ ಆರಂಭವಾಗಬೇಕಿತ್ತು. ಆದರೆ, ಕೆಲ ನಿಯಮಗಳನ್ನು ನಿಗಮವು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದ ಬಸ್‌ಗಳ ಸಂಚಾರದಲ್ಲಿ ಸ್ವಲ್ಪ ವಿಳಂಬವಾಗಿದೆ. ನಾಳೆಯಿಂದ ಇಂಥ ಸಮಸ್ಯೆ ಇರುವುದಿಲ್ಲ ಎಂದು ನಿಗಮದ ಅಧಿಕಾರಿಯೊಬ್ಬರು ವಿಜಯಪಥಕ್ಕೆ ತಿಳಿಸಿದ್ದಾರೆ.
ಅದೇನೆ ಇರಲಿ ತಮ್ಮ ಚಾಲನ ಸಿಬ್ಬಂದಿ ವರ್ಗದವರನ್ನು ಈ ಮೊದಲು ವಾರದ ಹಿಂದಿ ಮಾಡಿದ ಆದೇಶದಂತೆ ವಾರದ ಹಿಂದೆ ಮಾಡಿಸಿಕೊಂಡಿರುವ RT PCR ನೆಗೆಟಿವ್ ವರದಿಯನ್ನು ಮಾನ್ಯಮಾಡಿದ್ದರೆ ಸಾರ್ವಜನಿಕರು ಇಷ್ಟು ತೊಂದರೆ ಅನುಭವಿಸುತ್ತಿರಲಿಲ್ಲ.
ಇಂದು ಕರ್ತವ್ಯಕ್ಕೆ ಹಾಜರಾದ ಸಾರಿಗೆ ಸಿಬ್ಬಂದಿಗೆ ಕಡ್ಡಾಯವಾಗಿ ಕಳೆದ ಶನಿವಾರವೇ ಕೋವಿಡ್ ಟೆಸ್ಟ್ ಮಾಡಿಸಿರುವ (72 ಗಂಟೆಯೊಳಗೆ) ಟೆಸ್ಟ್‌ನಲ್ಲಿ ಕೊರೊನಾ ನೆಗೆಟಿವ್ ವರದಿ ಬಂದಿರುವುದನ್ನು ಆಯಾಯಾ ಡಿಪೋಗಳಲ್ಲಿ ಕೊಡಬೇಕು. ಜತೆಗೆ ಝೆರಾಕ್ಸ್ ಮಾಡಿಸಿದ ವರದಿ ಅಂಗಿಕರಿಸಲ್ಲ, ಪ್ರಿಂಟ್‌ಔಟ್ ಕಾಪಿಯೇ ಬೇಕು ಎಂದು ಡಿಪೋಗಳಲ್ಲಿ ಆದೇಶ ಮಾಡಿದ್ದರಿಂದ ಕರ್ತವ್ಯಕ್ಕೆ ಬಂದಿದ್ದ ಅರ್ಧಕರ್ಧ ಸಿಬ್ಬಂದಿ ವಾಪಸ್ ಹೋಗುವಂತಾಯಿತು. ಸಿಬ್ಬಂದಿ ವಾಪಸ್ ಮನೆಗೆ ಮರಳಿದ್ದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತು.