ರಾಯಚೂರು: ನಕಲಿ ಗೊಬ್ಬರ ಮಾರಾಟ ಮಾಡಿ ರೈತರಿಗೆ ವಂಚಿಸಲು ಸಿದ್ಧವಾಗಿದ್ದವರ ಹೆಡೆಮುರಿಯನ್ನು ಕೃಷಿ ಮತ್ತು ಪೊಲೀಸ್ ಅಧಿಕಾರಿ ಕಟ್ಟಿದ್ದಾರೆ.
ಲಿಂಗಸುಗೂರು ತಾಲೂಕಿನ ನಾಗಲಾಪೂರ ಬಳಿ ಮಿಂಚಿನ ದಾಳಿ ನಡೆಸಿದ ಕೃಷಿ ಹಾಗೂ ಪೊಲೀಸ್ ಅಧಿಕಾರಿಗಳ ತಂಡ ಲಕ್ಷಾಂತರ ರೂಪಾಯಿ ಮೌಲ್ಯದ ಸಾವಯವ ನಕಲಿ ಗೊಬ್ಬರವನ್ನು ಜಪ್ತಿ ಮಾಡಿದೆ.
ಕಲಬುರ್ಗಿಯ ಅಫಜಲಪುರದ ರೇಣುಕಾ ಶುಗರ್ ಫ್ಯಾಕ್ಟರಿಯಿಂದ ಕನಕಗಿರಿಗೆ ಸಾಗಿಸುತ್ತಿದ್ದ ನಕಲಿ ಗೊಬ್ಬರದ ಚೀಲಗಳನ್ನು ಜಪ್ತಿಮಾಡಲಾಗಿದೆ. 40 ಕೆ.ಜಿ.ತೂಕದ 462 ಚೀಲ ಗೊಬ್ಬರ ತುಂಬಿಕೊಂಡು ಸಾಗಿಸುತ್ತಿದ್ದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.
ಮುಂಗಾರು ಹಂಗಾಮು ಉತ್ತಮವಾಗಿರುವುದರಿಂದ ಎಲ್ಲೆಡೆ ಬಿತ್ತನೆ ಕಾರ್ಯ ಜೋರಾಗಿದೆ. ಹೀಗಾಗಿ ರೈತರು ಬೀಜ ಗೊಬ್ಬರಕ್ಕಾಗಿ ಪರಿತಪಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಅಕ್ರಮ ದಂಧೆಕೋರರು ನಕಲಿ ಗೊಬ್ಬರ ಮಾರಾಟ ನಡೆಸಿದ್ದಾರೆ.
ಸಾವಯವ ನಕಲಿ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಿ ವಂಚಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ ಖದೀಮರಿಗೆ ಚಳಿ ಬಿಡಿಸಿದ್ದಾರೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.