ಕಲಬುರಗಿ: ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವಿಧಿಸಲಾಗಿದ್ದ ಲಾಕ್ ಡೌನ್ ನಲ್ಲಿ ಸಡಿಲಿಕೆ ನೀಡಿರುವ ಕಾರಣ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗ-1 ರಿಂದ ಸೋಮವಾರ ಜೂನ್ 21 ರಿಂದ ಜಾರಿಗೆ ಬರುವಂತೆ ಕಲಬುರಗಿ ನಗರ ಹಾಗೂ ಕಲಬುರಗಿಯಿಂದ ವಿವಿದ ತಾಲೂಕು, ಜಿಲ್ಲೆಗಳಿಗೆ ಸಂಚರಿಸಲು 150 ರಿಂದ 200 ಬಸ್ಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ವಿಭಾಗ-1ರ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಎಚ್.ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಚಿಂಚೋಳಿ, ಚಿತ್ತಾಪೂರ, ಕಾಳಗಿ, ಸೇಡಂ ಮತ್ತು ಯಾದಗಿರಿ, ವಿಜಯಪುರ, ಹುಮನಾಬಾದ್, ಬಸವಕಲ್ಯಾಣ, ಬೀದರ್ ಮಾರ್ಗಗಳಿಗೆ ವಾಹನಗಳ ಕಾರ್ಯಾಚರಣೆ ಮಾಡಲಾಗುತ್ತಿದೆ.
ಆಸನ ಸಾಮರ್ಥ್ಯದ ಶೇ. 50ರಷ್ಟು ಮಾತ್ರ ಪ್ರಯಾಣಿಕರು ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಪ್ರತಿಯೊಬ್ಬ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿ ಸಾಲಿನಂತೆ ಬಸ್ಸಿನಲ್ಲಿ ಹತ್ತಬೇಕು ಎಂದು ತಿಳಿಸಿದ್ದಾರೆ.
ಪ್ರಾರಂಭಿಕ ಹಂತದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನೋಡಿಕೊಂಡು ಹಂತ ಹಂತವಾಗಿ ಅಂತರ ರಾಜ್ಯದ ನಿಯಮ/ ನಿರ್ದೇಶನದಂತೆ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳಿಗೆ (ಸೋಲಾಪೂರ, ಹೈದ್ರಾಬಾದ್ ಮಾರ್ಗಗಳಿಗೆ) ಪ್ರಯಾಣಿಕರ ಅಗತ್ಯತೆಗೆ ತಕ್ಕಂತೆ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.