ಬೆಂಗಳೂರು: ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಕೊರೊನಾ ಲಸಿಕೆಯನ್ನು ತಜ್ಞರ ಸಮಿತಿ ಸಲಹೆ ಮೇರೆಗೆ ನೀಡಿದ ನಂತರ ಹಂತ ಹಂತವಾಗಿ ರಾಜ್ಯದಲ್ಲಿ ಉನ್ನತ ಶಿಕ್ಷಣ ತರಗತಿಗಳನ್ನು ಆರಂಭಿಸುವಚಂತೆ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಕೊರೊನಾ ಸೋಂಕಿನ ತಡೆಗೆ ಲಸಿಕೆ ನೀಡುವುದೇ ಪರಿಹಾರ ಎಂದು ಸಮಿತಿ ಹೇಳಿದ್ದು, ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಅಭಿಯಾನವನ್ನು ಇನ್ನಷ್ಟು ತೀವ್ರಗೊಳಿಸಲು ಸಲಹೆ ನೀಡಲಾಗಿದೆ. ಇನ್ನು ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ತಡೆಗೆ ಉನ್ನತ ಮಟ್ಟದ ತಜ್ಞರ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅವರ ಸಲಹೆ ಮೇರೆಗೆ ಈ ತೀರ್ಮಾನ ಕೈಗೊಂಡಿರುವುದಾಗಿ ಮಂಗಳವಾರ ತಿಳಿಸಿದರು.
ಸಮಿತಿಯು ಸರ್ಕಾರ ಅನ್‌ಲಾಕ್ ಮಾಡರುವುದನ್ನು ಬೆಂಬಲಿಸಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆಯುವಂತೆ ಸಲಹೆ ನೀಡಿದೆ. ಮೊದಲು ಕಾಲೇಜುಗಳನ್ನು ತೆರೆಯಲಾಗುತ್ತದೆ ಎಂದು ಸಿಎಂ ಹೇಳಿದರು.
ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಉನ್ನತ ಮಟ್ಟದ ನುರಿತ ತಜ್ಞರ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಅವರು ಮಧ್ಯಂತರ ವರದಿ ನೀಡಿದ್ದಾರೆ. ಅದರಲ್ಲಿ ಕೆಲವು ನಿಬಂಧನೆಗಳೊಂದಿಗೆ ಶಾಲಾ ಕಾಲೇಜು ಆರಂಭಿಸುವ ಪ್ರಸ್ತಾಪ ಮಾಡಿದ್ದಾರೆ ಎಂದು ವಿವರಿಸಿದರು.
ಇನ್ನು 3ನೇ ಅಲೆ ತಡೆಗಟ್ಟಲು ಮಾನವ ಸಂಪನ್ಮೂಲ, ಆರ್ಥಿಕ ಸಂಪನ್ಮೂಲ ಹಾಗೂ ಪರಿಣತರ ನೆರವು ಪಡೆಯುವ ಕುರಿತು ಸಲಹೆ ನೀಡಿದ್ದಾರೆ. ವಿವಿಧ ವೈದ್ಯಕೀಯ ಸಂಘಟನೆಗಳ ಸಹಯೋಗದೊಂದಿಗೆ ವೈದ್ಯರು, ದಾದಿಯರ ಕೊರತೆ ನಿವಾರಣೆ, ರಾಜ್ಯದಲ್ಲಿರುವ ಎಲ್ಲ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆಯುವುದು.
ಕಾರ್ಪೊರೇಟ್ ಸಂಸ್ಥೆಗಳ ಸಹಕಾರದಿಂದ ಸಂಪನ್ಮೂಲಗಳ ನೆರವು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸಾರ್ವಜನಿಕರ ಸಹಭಾಗಿತ್ವ ಪಡೆಯುವ ಬಗ್ಗೆ ಸಲಹೆ ನೀಡಲಾಗಿದೆ ಎಂದು ತಿಳಿಸಿದರು.