ತುಮಕೂರು: ಆಮ್ ಆದ್ಮಿ ಪಕ್ಷವು ಕರ್ನಾಟಕ ರಾಜ್ಯದಲ್ಲಿ ಅವಿರತವಾಗಿ ಪಕ್ಷ ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ರಾಜ್ಯಾದ್ಯಂತ ಪಕ್ಷ ಸಂಘಟನೆಯ ಪುನರ್ರಚನೆ ಮಾಡುತ್ತಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಪಕ್ಷವು ಎಂಟು ತಿಂಗಳುಗಳಿಂದ ಸಿದ್ಧತೆ ನಡೆಸುತ್ತಿದ್ದು, ಇದರ ಅಂಗವಾಗಿ ತುಮಕೂರುನಲ್ಲಿಯೂ ಫೆಬ್ರವರಿ 10 ರಂದು ಪಕ್ಷದ ಮಿಸ್ಡ್‌ಕಾಲ್ ನಂ 7669400410 ಅನ್ನು ಪಕ್ಷದ ರಾಜ್ಯ ಉಸ್ತುವಾರಿ ರೋಮಿ ಭಾಟಿಯವರು ಬಿಡುಗಡೆ ಮಾಡಿದ್ದನ್ನು ಸ್ಮರಿಸಬಹುದಾಗಿದೆ. ಈ ಮಿಸ್ಡ್ ಕಾಲ್ ನಂಬರಿಗೆ ತುಮಕೂರು ಜಿಲ್ಲೆಯಲ್ಲಿ ಅತ್ಯುತ್ತಮ ಸ್ಪಂದನೆ ದೊರಕಿದೆ ಎಂದು ಬುಧವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ತುಮಕೂರು ಜಿಲ್ಲೆಗೆ ಪಕ್ಷದ ವೀಕ್ಷಕರನ್ನಾಗಿ ಪಕ್ಷದ ಹಿರಿಯ ಮುಖಂಡರಾದ ಬಿದನಗೆರೆ ಟಿ. ನಾಗಣ್ಣ ಅವರನ್ನು ನೇಮಕ ಮಾಡಲಾಗಿದೆ ಮತ್ತು ಪಕ್ಷದ ತುಮಕೂರು ನಗರ ಘಟಕದ ಅಧ್ಯಕ್ಷರನ್ನಾಗಿ ಸಮಾಜ ಸೇವಕ, ಉದ್ಯಮಿ ಮುನೀರ್ ಅಹಮದ್ ಅವರನ್ನು ನೇಮಕ ಮಾಡಲಾಯಿತು.
ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರವನ್ನು ಪಕ್ಷದ ರಾಜ್ಯ ಉಸ್ತುವಾರಿಗಳಾದ ರೋಮಿ ಭಾಟಿ ಮತ್ತು ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ ವಿತರಿಸಿದರು.
ನಾಗಣ್ಣ ಅವರ ಪರಿಚಯ
ನಾಗಣ್ಣ ಅವರು ಹೆಸರಾಂತ ಉದ್ಯಮಿಯಾಗಿದ್ದು, ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ರಾಜಕೀಯ ಅನುಭವ ಹೊಂದಿರುವ ನಾಗಣ್ಣರವರು ಕಳೆದ 2 ವರ್ಷಗಳಿಂದ ಆಮ್ ಆದ್ಮಿ ಪಕ್ಷ ಬೆಂಗಳೂರು ಜಿಲ್ಲಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಮುನೀರ್ ಅವರ ಪರಿಚಯ
ಮನೀರ್ ಅಹಮದ್ ಕಳೆದ ಇಪ್ಪತ್ತು ವರ್ಷಗಳಿಂದ ತುಮಕೂರು ನಗರದ ಮನೆಮಾತಾಗಿರುವ ಉದ್ಯಮಿ. ಅನೇಕ ಸಮಾಜ ಸೇವಾ ಸಂಘಟನೆಗಳಲ್ಲಿ ಸಕ್ರಿಯವಾಗಿರುವ ಮುನೀರ್ ಅವರಿಗೆ ತುಮಕೂರು ನಗರದಲ್ಲಿ ಪಕ್ಷದ ಜವಾಬ್ದಾರಿಯನ್ನು ವಹಿಸಲಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ತುಮಕೂರು ಜಿಲ್ಲಾ ಘಟಕದ ಪುನರ್ರಚನೆಯನ್ನೂ ಮಾಡಲಾಗುವುದು ಎಂದು ಪೃಥ್ವಿ ರೆಡ್ಡಿ ತಿಳಿಸಿದರು. ಪಕ್ಷದ ತುಮಕೂರು ವೀಕ್ಷಕರಾದ ಬಿ.ಟಿ.ನಾಗಣ್ಣ, ತುಮಕೂರು ನಗರ ಘಟಕದ ಅಧ್ಯಕ್ಷರಾದ ಮುನೀರ್ ಅಹಮದ್ ಇದ್ದರು.