ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗ ಸಂಸ್ಥೆಯಲ್ಲಿ ಪ್ರಯಾಣಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ವಾರಾಂತ್ಯದ ಕರ್ಫ್ಯೂ ಸಮಯದಲ್ಲೂ 1200 ಬಿಎಂಟಿಸಿ ಬಸ್ಗಳು ಕಾರ್ಯಾಚರಣೆ ನಡೆಸಲಿವೆ ಎಂದು ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷ, ಸಮರ್ಪಕ, ಸಾರಿಗೆ ಸೇವೆಗಳನ್ನು ಒದಗಿಸಲು ಬಿಎಂಟಿಸಿ ಬದ್ಧವಾಗಿದ್ದು, ಸರ್ಕಾರದ ಆದೇಶದಂತೆ ಬಿಎಂಟಿಸಿಯು ಪ್ರಯಾಣಿಕರ ಅನುಕೂಲಕ್ಕಾಗಿ ಜೂನ್ 21 ರಿಂದ ತನ್ನ ಸೇವೆಗಳನ್ನು ಪ್ರಾರಂಭಿಸಿದೆ.
ಮುಂದುವರಿದಂತೆ, ರಾಜ್ಯ ಸರ್ಕಾರ ಜೂನ್ 25ರ ಶುಕ್ರವಾರ ರಾತ್ರಿ 7 ರಿಂದ ಜೂನ್ 28ರ ಸೋಮವಾರ ಬೆಳಗ್ಗೆ 5 ವರೆಗೆ ವಾರಾಂತ್ಯದ ಕರ್ಫ್ಯೂ ಘೋಷಿಸಿದೆ. ಈ ದಿನಗಳಲ್ಲಿ, ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿ, ಹಾಲು ಮತ್ತು ವೈದ್ಯಕೀಯ ಚಟುವಟಿಕೆಗಳಿಗೆ ವ್ಯವಹರಿಸುವ ಅಂಗಡಿ ಇತ್ಯಾದಿಗಳನ್ನು ಕಾರ್ಯನಿರ್ವಹಿಸಲು ಮಾತ್ರ ಅನುಮತಿಸಲಾಗಿದೆ ಮತ್ತು ಇತರ ವ್ಯವಹಾರ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಈ ಕಾರಣದಿಂದಾಗಿ,ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರು ಬಿಎಂಟಿಸಿ ಬಳಸುವರೆಂದು ನಿರೀಕ್ಷಿಸಲಾಗಿದೆ. ಆದ್ದರಿಂದ, ಬಿಎಂಟಿಸಿ ವಾರಾಂತ್ಯದಲ್ಲಿ ತನ್ನ ಬಸ್ ಸೇವೆ ಕಡಿಮೆ ಮಾಡುತ್ತಿದ್ದು, ನಿತ್ಯ ಸಂಚರಿಸುತ್ತಿದ್ದ 4 ಸಾವಿರ ಬಸ್ಗಳ ಬದಲಾಗಿ 1200 ಬಸ್ಗಳನ್ನು ಕಾರ್ಯಾಚರಣೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಬಸ್ಗಳ ಕಾರ್ಯಾಚರಣೆಯ ವಿವರ
25-06-2021 (ಶುಕ್ರವಾರ) 4000 ಬಸ್ಗಳು,
26-06-2021 (ಶನಿವಾರ) 1200 ಬಸ್ಗಳು,
27-06-2021 (ಭಾನುವಾರ) 1200 ಬಸ್ಗಳು,
28-06-2021 (ಸೋಮವಾರ) 4000 ಬಸ್ಗಳು.