ಮೈಸೂರು: ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರವನ್ನು ಮುಂಬೈನಲ್ಲಿ ತೀರ್ಮಾನಿಸಲಾಗುವುದು ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಇಲ್ಲಿಗೆ ಬಂದಿರುವುದು ಸುತ್ತೂರು ಶ್ರೀಗಳನ್ನು ಭೇಟಿ ಮಾಡಲು. ಸಿಎಂ ಬಂದು ಭೇಟಿ ಮಾಡಿ ಎಂದಿರುವುದು ನನಗೆ ಗೊತ್ತಿಲ್ಲ. ಸುತ್ತೂರು ಶ್ರೀಗಳ ಪೂರ್ವಾಶ್ರಮದ ತಾಯಿ ದೈವಾದೀನರಾದ ಕಾರಣ ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದರು.
ರಾಜೀನಾಮೆ ವಿಚಾರವಾಗಿ ಮಾತನಾಡಿದ ಜಾರಕಿಹೊಳಿ, ಸರ್ಕಾರ ತಂದವನು ನಾನು. ಸಚಿವ ಸ್ಥಾನ ಕೇಳುತ್ತೇನೆ. ಸಚಿವ ಸ್ಥಾನಕ್ಕಾಗಿ ನಾನು ಸ್ವಾಮೀಜಿಯವರನ್ನು ಭೇಟಿ ಮಾಡುತ್ತಿಲ್ಲ. ಈ ಬಗ್ಗೆ ಸ್ವಾಮೀಜಿಯವರನ್ನು ಭೇಟಿಯಾದ ಬಳಿಕ ಮಾತಾಡುತ್ತೇನೆ. ರಾಜೀನಾಮೆ ವಿಚಾರ ಮುಂಬೈನಲ್ಲಿ ಹೋಗಿ ಮಾತಾಡುತ್ತೇನೆ ಎಂದರು.
ವಿಶೇಷ ವಿಮಾನ: ನಗರದ ಸುತ್ತೂರು ಮಠಕ್ಕೆ ಭೇಟಿ
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ತನ್ನ ಸಹೋದರನ ಜತೆ ವಿಶೇಷ ವಿಮಾನದ ಮೂಲಕ ನಗರದ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ. ಗೋಕಾಕ್ನಲ್ಲಿರುವ ಗೃಹ ಕಚೇರಿಯಿಂದ ಹೊರಬಂದ ಜಾರಕಿಹೊಳಿ ನೇರವಾಗಿ ಸಹೋದರ ಲಖನ್ ಜಾರಕಿಹೊಳಿ ಮನೆಯಲ್ಲಿ ಕೆಲಹೊತ್ತು ಮಾತುಕತೆ ನಡೆಸಿದರು.
ನಂತರ ಅಲ್ಲಿಂದ ಲಖನ್, ಅಳಿಯ ಅಂಬಿರಾವ್ ಪಾಟೀಲ್ ಅವರೊಟ್ಟಿಗೆ ಬೆಳಗಾವಿ ಸಾಂಬ್ರಾ ವಿಮಾನಕ್ಕೆ ಬಂದಿಳಿದರು. ನಂತರ ವಿಮಾನದ ಮೂಲಕ ಮೈಸೂರಿಗೆ ಬಂದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಲು ರಮೇಶ್ ನಿರಾಕರಿಸಿದರು. ʻವಾಪಸ್ ಬಂದು ಎಲ್ಲವನ್ನೂ ಮಾತನಾಡುತ್ತೇನೆ. ಇವತ್ತು ಶ್ರೀಗಳನ್ನು ಭೇಟಿಯಾಗುತ್ತೇವೆʼ ಎಂದಷ್ಟೇ ಪ್ರತಿಕ್ರಿಯಿಸಿದ್ದರು.