ಕಲಬುರಗಿ: ನೆರೆಯ ಮಹಾರಾಷ್ಟ್ರ ಮತ್ತು ಕಲಬುರಗಿಗೆ ಬಿಡಿಸಲಾರದ ನಂಟಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕಲಬುರಗಿ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಇಂದಿನಿಂದ (ಜೂನ್ 26) ಮಹಾರಾಷ್ಟ್ರದಿಂದ ಕಲಬುರಗಿಗೆ ಬರುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ತರುವುದನ್ನು ಕಡ್ಡಾಯ ಮಾಡಿದೆ.
ದೇಶದಲ್ಲಿ ಮೊದಲು ಕೊರೊನಾ ಹೆಚ್ಚಾಗಿದ್ದು ಮಹಾರಾಷ್ಟ್ರದಲ್ಲಿ. ರಾಜ್ಯದಲ್ಲಿ ಮೊದಲು ಕೊರೊನಾ ಪತ್ತೆಯಾಗಿದ್ದು ಮತ್ತು ದೇಶದಲ್ಲಿ ಕೊರೊನಾಗೆ ಮೊದಲ ಬಲಿ ಪಡೆದಿದ್ದು ಕಲಬುರಗಿಯಲ್ಲಿ. ದೇಶದಲ್ಲಿ ಎರಡನೇ ಅಲೆ ಜೋರಾಗಿದ್ದು ಮೊದಲು ಮಹಾರಾಷ್ಟ್ರದಲ್ಲಾದರೆ, ರಾಜ್ಯದಲ್ಲಿ ಎರಡನೇ ಅಲೆ ಕೂಡಾ ಜೋರಾಗಿದ್ದು ಕಲಬುರಗಿಯಲ್ಲಿ. ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಾದರೆ ಅದರ ಹೆಚ್ಚಿನ ಪರಿಣಾಮ ಬೀರುವುದು ರಾಜ್ಯದ ಕಲಬುರಗಿ ಜಿಲ್ಲೆಯ ಮೇಲೆ.
ಸದ್ಯ ಮಹಾರಾಷ್ಟ್ರದಲ್ಲಿ ಮೂರನೇ ಅಲೆಯ ಅಬ್ಬರ ಹೆಚ್ಚಾಗುತ್ತಿದೆ. ಜೊತೆಗೆ ಡೆಲ್ಟಾ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿವೆ. ಅಲ್ಲಿ ಡೆಲ್ಟಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಬಿಸಿಲನಾಡು ಕಲಬುರಗಿ ಜಿಲ್ಲೆಯ ಜನರಿಗೆ ನಡುಕ ಹುಟ್ಟಿಸುತ್ತಿದೆ. ಹೀಗಾಗಿ ಜಿಲ್ಲಾಡಳಿತ ಮಹಾರಾಷ್ಟ್ರದಿಂದ ಕಲಬುರಗಿ ಬರುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿದೆ. ಎಪ್ಪತ್ತೆರಡು ಗಂಟೆಯೊಳಗಿನ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿದ್ದು, ರಿಪೋರ್ಟ್ ಇಲ್ಲದೇ ಬರುವವರಿಗೆ ಅವಕಾಶ ಇಲ್ಲ. ಇದಕ್ಕಾಗಿ ಜಿಲ್ಲೆಯ ಐದು ಕಡೆ ಚೆಕ್ ಪೋಸ್ಟ್ ಮೂಲಕ ತಪಾಸಣೆ ನಡೆಸಲಾಗುತ್ತಿದೆ.
ಹುಬ್ಬಳ್ಳಿಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದ್ದು, ಅಗತ್ಯ ವಸ್ತುಗಳ ಮಾರಾಟಕ್ಕೆ ಬೆಳಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ ಅನುಮತಿ ಪಡೆದಿರುವ ಮದುವೆ ಸಮಾರಂಭಗಳನ್ನು 40 ಕ್ಕಿಂತ ಹೆಚ್ಚು ಜನರು ಸೇರದೆ ಆಯೋಜಿಸಬಹುದು. ಅಂತ್ಯಕ್ರಿಯೆಗಳಲ್ಲಿ ಗರಿಷ್ಠ 5 ಜನ ಮಾತ್ರ ಭಾಗವಹಿಸಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ನೀಡಿದೆ.