ಬೆಳಗಾವಿ: ರಾಸಲೀಲೆ ಸಿಡಿ ವಿಚಾರ ಭಾರಿ ಸದ್ದು ಮಾಡಿದ್ದರಿಂದ ಸಚಿವ ಸ್ಥಾನ ಕಳೆದುಕೊಂಡು ಒಂದು ರೀತಿ ರಾಜಕೀಯ ಅತಂತ್ರ ಸ್ಥಿತಿಗೆ ತಲುಪಿರುವ ಶಾಸಕ ರಮೇಶ್ ಜಾರಕಿಹೊಳಿಗೆ ರಾತ್ರಿ ಹೊತ್ತು ಸರಿಯಾಗಿ ನಿದ್ದೆ ಬರುತ್ತಿಲ್ಲ, ಇನ್ನು ಬೆಳಗಾದರೆ ಕಾನೂನಿನ ಆಯುಧದಲ್ಲಿ ಸಿಲುಕಿಕೊಳ್ಳುವ ಭಯ, ಇದರಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಇನ್ನು ರಾಜಕೀಯವೇ ನನಗೆ ಬೇಡ, ಈ ಎಲ್ಲ ಗೊಂದಲಗಳಿಂದ ಹೊರಬಂದರೆ ಸಾಕು ಎಂದು ಎಣಿಸುತ್ತಿರುವ ರಮೇಶ್ ಜಾರಕಿಹೊಳಿ ಅವರು ಅದಕ್ಕೆ ಹಲವಾರು ನಾಯಕರ ಮನೆ ಕದ ತಟ್ಟುತ್ತಿದ್ದಾರೆ. ಅದರಂತೆ ಇಂದು ಸಂಜೆ (ಜೂನ್ 28) ಮತ್ತೆ ಮುಂಬೈಗೆ ತೆರಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಸಂಜೆ ಬೆಳಗಾವಿ ಸಾಂಬ್ರಾ ಏರ್ಪೋರ್ಟ್ನಿಂದ ಮುಂಬೈಗೆ ಕೆಲ ಆಪ್ತರ ಜೊತೆ ಪ್ರಯಾಣ ಬೆಳೆಸಲಿದ್ದು, ಜೂನ್ 29ರ (ನಾಳೆ) ಬೆಳಗ್ಗೆ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿ, ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ದೇವೇಂದ್ರ ಫಡ್ನವಿಸ್, ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಫಡ್ನವಿಸ್ ಅವರನ್ನು ರಾಜಕೀಯ ಗಾಡ್ಫಾದರ್ ಎಂದು ಜಾರಕಿಹೊಳಿ ನಂಬಿದ್ದಾರೆ.
ಈ ನಡುವೆ ತಮ್ಮ ಏಳಿಗೆ ಸಹಿಸದೇ ಷಡ್ಯಂತ್ರ ಮಾಡಿದ್ದಾರೆಂದು ಬಿಜೆಪಿಯ ಕೆಲ ಪ್ರಮುಖ ನಾಯಕರ ವಿರುದ್ಧವೇ ಈಗ ರಮೇಶ್ ಮಾಡಿರುವ ಗಂಭೀರ ಆರೋಪವನ್ನು ಫಡ್ನವಿಸ್ ಹೈಕಮಾಂಡ್ ನಾಯಕರ ಗಮನಕ್ಕೆ ತಂದಿದ್ದಾರೆ. ಈ ವಿಚಾರದ ಬಗ್ಗೆ ಹೈಕಮಾಂಡ್ ಸಂದೇಶವನ್ನು ಫಡ್ನವಿಸ್ ರಮೇಶ್‌ಗೆ ತಿಳಿಸುತ್ತಾರಾ ಎಂಬ ಪ್ರಶ್ನೆ ಸದ್ಯ ಹುಟ್ಟುಕೊಂಡಿರೋದು.
ಇನ್ನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡೋದಾಗಿ ಹೇಳಿರುವ ರಮೇಶ್ ಜಾರಕಿಹೊಳಿಗೆ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ರಾಜ್ಯ ನಾಯಕರು ಸಲಹೆ ನೀಡಿದ್ದಾರೆ. ಜತೆಗೆ ನಾಳೆ ಫಡ್ನವಿಸ್ ಭೇಟಿ ಬಳಿಕ ದೆಹಲಿಗೆ ತೆರಳಿ, ಹೈಕಮಾಂಡ್ ನಾಯಕರ ಭೇಟಿಯಾಗುವ ಸಾಧ್ಯತೆಯಿದೆ.
ಸಹೋದರರ ಸಲಹೆ
ಆತುರಕ್ಕೆ ಬಿದ್ದು ಯಾವುದೇ ನಿರ್ಧಾರ ಬೇಡ ಎಂದು ನಿನ್ನೆ ತಡರಾತ್ರಿ ನಡೆದ ಜಾರಕಿಹೊಳಿ ಬ್ರದರ್ಸ್ ಮೀಟಿಂಗ್ನಲ್ಲಿ ಸಹೋದರರು ಸಲಹೆ ನೀಡಿದ್ದಾರೆ. ಇನ್ನು ಇಂದಿನ ಮಾನಸಿಕ ವೇದನೆಯನ್ನು ತಡೆದುಕೊಂಡರೆ ಮತ್ತೆ ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮುಂದೆ ಹಲವು ಅಡ್ಡಿಗಳು ಎದುರಾಗಬಹುದು ಎಂದು ತಿಳಿ ಹೇಳಿದ್ದಾರೆ ಎನ್ನಲಾಗಿದೆ.