ಅಕ್ಟೋಬರ್ 12 -2016 ಬುಧವಾರ ಮುಂಜಾನೆ 3.30ರ ಸಮಯ. ನನ್ನ ಶ್ರೀಮತಿ ಗಂಡು ಮಗುವಿಗೆ ಜನ್ಮ ನೀಡಿದ ಸಮಯ. ಮಂಗಳವಾರ ರಾತ್ರಿ ಸುಮಾರು 10.30ರ ವೇಳೆಗೆ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ಆಸ್ಪತ್ರೆಗೆ ದಾಖಲಿಸಲಾಯಿತು. ಅಂದು ಪ್ರಸವ ವೇದನೆ ತಾಳಲಾರದೆ ಚಡಪಡಿಸುತ್ತಿದ್ದ ನನ್ನ ಶ್ರೀಮತಿಗೆ ಇಬ್ಬರು ನರ್ಸ್‌ಗಳು ಮತ್ತು ಒಬ್ಬರು ತರಬೇತಿ ವೈದ್ಯರು ಮತ್ತೊಬ್ಬರು ತಜ್ಞ ವೈದ್ಯರು ಸುಲಲಿತವಾಗಿ ಹೆರಿಗೆ ಮಾಡಿಸಿದರು. ಗಂಡು ಮಗು ಜನಿಸಿತು.
ಹೆರಿಗೆ ನಾರ್ಮಲ್ ಆದರೂ ಆಕೆ ಪ್ರಸವ ವೇದನೆ ತಾಳಲಾರದೆ ಒದ್ದಾಡಿದ್ದರಿಂದ ಮಗುವಿಗೆ ತುಸು ಆಯಾಸವಾಗಿತ್ತು. ತಕ್ಷಣ ತೀವ್ರ ನಿಗಾ ವಹಿಸಿದ ಪರಿಣಾಮ ಮಗು ಯಾವುದೇ ಪ್ರಾಣಾಪಾಯವಿಲ್ಲದೆ ಲವಲವಿಕೆಯಿಂದ ಇತ್ತು.
ಇನ್ನು ಆಸ್ಪತ್ರೆಯಲ್ಲಿ ಸರಿಯಾದ ಹೆರಿಗೆ ವಾರ್ಡ್ ಇಲ್ಲದೆ ಒಂದೇ ಹಾಸಿಗೆ ಮೇಲೆ ಇಬ್ಬಿಬ್ಬರು ಬಾಣಂತಿಯರನ್ನು ಇನ್ನೂ ಕೆಲವೊಮ್ಮೆ ಅದನ್ನು ಮೀರಿ ಜಾಗವಿಲ್ಲದೆ ನೆಲದ ಮೇಲೆ ಚಾಪೆ ಹಾಸಿ ಮಲಗಿಸುವುದು ಇತ್ತು. ನಾವು ಕೂಡ ತಾಯಿ ಮಗುವನ್ನು ಅಂದು ನೆಲದ ಮೇಲೆ ಚಾಪೆ ಹಾಸಿ ಮಲಗಿಸಿದ್ದೆವು.
ನಂತರ ಹೆರಿಗೆ ತಜ್ಞವೈದ್ಯರು (Maternity specialist) ಮತ್ತು ಅಂದು ಸ್ಥಾನೀಯ ವೈದ್ಯಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಸಂಜಯ್ ಕುಮಾರ್ ಅವರಿಗೆ ವಿಷಯ ಮುಟ್ಟಿಸಿದೆವು. ತಕ್ಷಣ ಅವರು ಒಂದು ವ್ಯವಸ್ಥೆ ಮಾಡಿದರು. ಜತೆಗೆ ನೀವು ಈ ಬಗ್ಗೆ ಒಂದು ಒಳ್ಳೆ ವರದಿ ಮಾಡಿ ಕೊಠಡಿಗಳ ಮತ್ತು ಬೆಡ್ ಸಂಖ್ಯೆ ಹೆಚ್ಚಿಸಲು ನೆರವಾಗಿ ಎಂದು ಜನಪರವಾದ ಕಳಕಳಿಯ ಮನವಿ ಮಾಡಿದರು.
ಅಂದು ಅವರ ಜನಪರ ಮನವಿಗೆ ನಾನು ಒಬ್ಬ ಪತ್ರಕರ್ತನಾಗಿ ಓಗೊಟ್ಟು ಸುದ್ದಿಯನ್ನು ಮಾಡಿಸಿದೆ. ನಾನು ಅಂದು ಉಪಸಂಪಾದಕನಾಗಿದ್ದ ವಿಜಯವಾಣಿ ಪತ್ರಿಕೆ ಮತ್ತು ದಿಗ್ವಿಜಯ ನ್ಯೂಸ್ ನಲ್ಲೂ ಅಲ್ಲಿನ ಅವ್ಯವಸ್ಥೆ ಬಗ್ಗೆ ಸುದ್ದಿ ಬಂತು. ನಂತರದ ದಿನಗಳಲ್ಲಿ ಅದು ಫಲಕೊಟ್ಟಿತು ಎಂದೆ ಹೇಳಬಹುದು. ಅಂದರೆ ಈಗ ಒಳ್ಳೆ ಹೆರಿಗೆ ವಾರ್ಡ್‌ಗಳನ್ನು ನಾವು ಮಂಡ್ಯ ದೊಡ್ಡಾಸ್ಪತ್ರೆಯಲ್ಲಿ ಕಾಣಬಹುದು.
ಇಂಥ ಜನಪರ ಕಾಳಜಿಯುಳ್ಳ ಮತ್ತು ಅಲ್ಲಿಗೆ ಬರುವ ಪ್ರತಿಯೊಬ್ಬ ರೋಗಿಯನ್ನು ತಮ್ಮ ಮನೆಯ ಮಗುವಿನ ರೀತಿ ನೋಡಿಕೊಳ್ಳುವ ವೈದ್ಯರಾದ ಡಾ. ಸಂಜಯ್ ಕುಮಾರ್ ಸರ್ ಮತ್ತು ಅವರ ಎಲ್ಲ ವೈದ್ಯರಿಗೆ ಇಂದಿನ ವೈದ್ಯದಿನದ ಶುಭಾಶಯಗಳು. ಅವರ ಜನಪರ ನಿಲುವು ಹೀಗೆ ನಿರಂತರವಾಗಿ ಸಾಗಲಿ. ಹೆಚ್ಚಾಗಿ ಬಡವರೇ ಬರುವ ಮಿಮ್ಸ್ ಆಸ್ಪತ್ರೆ ರೋಗಿಗಳಿಗೆ ಮನೆ ವಾತಾವರಣ ನೀಡಲಿ ಎಂದು ಪ್ರಾರ್ಥಸುತ್ತೇನೆ.
ನಿಜಕ್ಕೂ ನಾನು ಹೆರಿಗೆ ತಜ್ಞವೈದ್ಯರಾದ ಡಾ. ಸಂಜಯ್ ಕುಮಾರ್ ಸರ್ ಅವರಿಗೆ ವಿಶೇಷವಾಗಿ ವೈದ್ಯದಿನಾಚರಣೆಯ ಶುಭಾಯಶಗಳನ್ನು ತಿಳಿಸುತ್ತೇನೆ. ಜತೆಗೆ ನನ್ನಂತಹ ಸಾವಿರಾರು ಫಲಾನುಭವಿಗಳ ಭಾವನೆಗಳ ಸಂಕೇತವಾಗಿರುವ ಇಂಥ ವೈದ್ಯರಿಗೆ, ಎಲ್ಲ ಸಿಬ್ಬಂದಿ ವರ್ಗಕ್ಕೆ ಹಾಗೂ ಸಮಸ್ತ ವೈದ್ಯ ಲೋಕಕ್ಕೆ ನನ್ನ ನಮನಗಳು.
ವೈದ್ಯೋ ನಾರಾಯಣೋ ಹರಿಃ