NEWSರಾಜಕೀಯಶಿಕ್ಷಣ-

ಕೇಂದ್ರ ಸರ್ಕಾರದ್ದು ರಾಷ್ಟ್ರೀಯ ಶಿಕ್ಷಣ ನೀತಿಯೋ ಅಥವಾ ಕೋಮುವಾದಿಗಳ ಶಿಕ್ಷಣ ನೀತಿಯೋ? ಸಿಎಂಗೆ ಎಚ್‌ಸಿಎಂ ಪತ್ರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಹಲವು ಅಪಾಯಕಾರಿ ನೀತಿಗಳ ಪೈಕಿ ರಾಷ್ಟ್ರೀಯ ಶಿಕ್ಷಣ ನೀತಿ-2020 ಕೂಡಾ ಒಂದು. ಬಹುತೇಕ ನೇರವಾಗಿ ಮತ್ತು ಪರೋಕ್ಷವಾಗಿ ಮನುವಾದವನ್ನೇ ಪ್ರತಿಬಿಂಬಿಸುವ ಬಹಳಷ್ಟು ಅಂಶಗಳನ್ನು ಹೊಂದಿರುವ ಈ ಹೊಸ ಶಿಕ್ಷಣ ನೀತಿಯಲ್ಲಿ ಇರುವಂತಹ ಬಹುತ್ವ ಮೌಲ್ಯಗಳ ವಿರೋಧಿ ಅಂಶಗಳನ್ನು ತೆಗೆದು ಹಾಕಬೇಕೆಂದು ಆಗ್ರಹಿಸಿ ಮಾಜಿ ಸಚಿವ ಡಾ. ಎಚ್.ಸಿ.ಮಹದೆವಪ್ಪ ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಈ ಹೊಸ ಶಿಕ್ಷಣ ನೀತಿ–2020 ದೇಶದ ಸಂವಿಧಾನಾತ್ಮಕ ಆಶಯಗಳಿಗೆ ಮತ್ತು ಸಾಮಾಜಿಕ ನ್ಯಾಯದ ಕಲ್ಪನೆಗೆ ವ್ಯತಿರಿಕ್ತವಾಗಿದ್ದು ಶಿಕ್ಷಣದ ಮೂಲಕ ಸಾಧ್ಯವಾಗುವಂತಹ ಸಮೃದ್ಧ ಭಾರತದ ನಿರ್ಮಾಣಕ್ಕೆ ಪೂರಕವಾಗಿರದೇ ಮತ್ತೊಮ್ಮೆ ಬಹುತ್ವದ ಮೌಲ್ಯವನ್ನು ನಾಶ ಮಾಡುವ ಕೇಸರೀಕರಣದ ಉದ್ದೇಶವನ್ನು ಜಾರಿಗೊಳಿಸಲು ಹೊರಟಿದೆ.

ಇನ್ನು ಬದಲಾವಣೆ ಹೆಸರಿನಲ್ಲಿ ಬರುತ್ತಿರುವ ಈ ಹೊಸ ಶಿಕ್ಷಣ ನೀತಿಯು ಈ ದೇಶದ ಸಂವಿಧಾನಿಕ ಮೌಲ್ಯಗಳಿಗೆ ಅನುಸಾರವಾಗಿ ರೂಪುಗೊಂಡಿರುವ ಶೈಕ್ಷಣಿಕ ಮಾದರಿಯನ್ನು ಹಾಳು ಮಾಡುವ ಮತ್ತು ಮನುವಾದದ ಬಹುತೇಕ ರೀತಿ ನೀತಿಗಳನ್ನು ಶಿಕ್ಷಣ ವ್ಯವಸ್ಥೆಯ ಮೂಲಕ ಮಕ್ಕಳಲ್ಲಿ ಸೇರಿಸಲು ಮಾಡುತ್ತಿರುವಂತಹ ಹುನ್ನಾರವಾಗಿದೆ.

ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಕಾಲ ಕಾಲಕ್ಕೆ ಬದಲಿಸುತ್ತಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ವಿಧಾನಗಳನ್ನು ಅಳವಡಿಸುವುದಕ್ಕೆ ಪೂರಕವಾಗಿ ಈಗ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದ್ದೇವೆ ಎಂಬ ಮಾತನ್ನು ಸರ್ಕಾರ ಹೇಳುತ್ತಿದೆ. ಆದರೆ ಈ ಹಿಂದಿನ ಬದಲಾಣೆಗಳು ಮತ್ತು ಈಗಿನ ಬದಲಾವಣೆಯ ಸ್ವರೂಪವನ್ನು ಗಮನಿಸುತ್ತಿದ್ದರೆ ಇದು ನಿಜಕ್ಕೂ ಒಮ್ಮೆ ಎಲ್ಲರೂ ಆತಂಕ ಪಡಬೇಕಾದಂತಹ ಸಂವಿಧಾನ ವಿರೋಧಿ ಉದ್ದೇಶವನ್ನು ಒಳಗೊಂಡಿದೆ.

ದೇಶದ ಎಲ್ಲಾ ವರ್ಗದ ಮಕ್ಕಳ ಭವಿಷ್ಯಕ್ಕೆ ಉತ್ತಮ ಅಡಿಪಾಯ ಹಾಕುವಂತಹ ಶಿಕ್ಷಣ ವ್ಯವಸ್ಥೆಯ ನೀತಿಯಲ್ಲಿ ಈ ಹಿಂದೆ ಉಂಟಾಗಿರುವ ಬದಲಾವಣೆಗಳು ಮತ್ತದರ ಉದ್ದೇಶವನ್ನು ನಾವು ಗಮನಿಸುವುದಾದರೆ ಈ ಕೆಳಕಾಣಿಸಿದ ಅಂಶಗಳನ್ನು ಪರಿಗಣಿಸಬಹುದು.

1968 ರಲ್ಲಿ ಮೊದಲ ಬಾರಿ ಭಾರತದ ಪ್ರಧಾನ ಮಂತ್ರಿಗಳಾಗಿದ್ದ ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿ ದೇಶದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಯಿತು. 1968 ರ ಶಿಕ್ಷಣ ನೀತಿಯು ದೇಶದ ಸಮಗ್ರ ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ನೀತಿಗಳನ್ನು ರೂಪಿಸಿ, 14 ವರ್ಷದವರೆಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿ ಅದಾದ 18 ವರ್ಷಗಳ ಬಳಿಕ ಶಿಕ್ಷಣ ಕ್ಷೇತ್ರದ ಆಧುನಿಕತೆಗೆ ಅನುಸಾರವಾಗಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಅವಧಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಹತ್ತರ ಬದಲಾವಣೆಗಳು ಆದವು.

ಇದಾದ ತರುವಾಯ 1986 ರಲ್ಲಿ ರಾಜೀವ್ ಗಾಂಧಿಯವರ ನೇತೃತ್ವದಲ್ಲಿ ಜಾರಿಗೊಳಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿಯು ನಿಜಕ್ಕೂ ಭಾರತದ ಶೈಕ್ಷಣಿಕ ಇತಿಹಾಸದಲ್ಲಿ ಕ್ರಾಂತಿಕಾರಕ ನಡೆ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಕಾರಣ ಈ ವೇಳೆ ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಸೇರಿದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಯಿತು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಸಲುವಾಗಿ ರಾಜೀವ್ ಗಾಂಧಿಯವರು ಸ್ಕಾಲರ್ ಶಿಪ್ ವ್ಯವಸ್ಥೆಯನ್ನು ಜಾರಿಗೊಳಿಸಿದರು.

ರಾಜೀವ್ ಗಾಂಧಿಯವರ ಕ್ರಮದಿಂದಾಗಿಯೇ 1961 ರ ಜನಗಣತಿಯ ವೇಳೆ 28.3% ನಷ್ಟಿದ್ದ ಭಾರತದ ಸಾಕ್ಷರತೆಯ ದರವು 1991 ರ ವೇಳೆಗೆ ಅಂದರೆ 1986 ರ ರಾಜೀವ್ ಗಾಂಧಿಯವರ ಹೊಸ ಶಿಕ್ಷಣ ನೀತಿಯ ಜಾರಿಯ 5 ವರ್ಷಗಳ ನಂತರದಲ್ಲಿ ಬರೋಬ್ಬರಿ 52.21% ಗೆ ಏರಿತು. ಮಹಿಳೆಯರಿಗೆ ಸಮಾನ ಶಿಕ್ಷಣದ ಹಕ್ಕು ಸಾಕಾರಗೊಂಡಿದ್ದೇ ಈ ಅವಧಿಯಲ್ಲಿ ಎಂಬುದು ಭಾರತದ ಪಾಲಿಗೆ ಅತ್ಯಂತ ಮಹತ್ವದ ಸಂಗತಿಯಾಗಿದೆ.

ಇನ್ನು 2005 ರಲ್ಲಿ ಡಾ.ಮನಮೋಹನ್ ಸಿಂಗ್ ಅವರು ಜಾರಿಗೊಳಿಸಲಾದ ಶಿಕ್ಷಣ ನೀತಿಯಲ್ಲಿನ ಬದಲಾವಣೆಗಳು ತಾಂತ್ರಿಕ ಶಿಕ್ಷಣವನ್ನು ಪಡೆಯುವ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಳ ಮೂಲಕ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವಂತಹ ಅವಕಾಶವನ್ನು ಸೃಷ್ಟಿಸಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಸ್ತುತ ಜಾರಿಗೊಳಿಸಲು ಹೊರಡುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ – 2020 ಬಹಳಷ್ಟು ಸಮಸ್ಯೆಯಿಂದ ಕೂಡಿದ್ದು ಪ್ರಜಾಪ್ರಭುತ್ವ ನೆಲದ ಬಹುತ್ವದ ಆಶಯಗಳನ್ನು ಹತ್ತಿಕ್ಕುವ ಮತ್ತು ಶಿಕ್ಷಣ ವ್ಯವಸ್ಥೆಯ ಮೂಲಕ ತಮ್ಮ ರಾಜಕೀಯ ಸಿದ್ಧಾಂತವನ್ನು ಮಕ್ಕಳಲ್ಲಿ ಬಿತ್ತಲು ಹೊರಟಿರುವ ಹೊತ್ತಿಗೆಯಂತಿದೆ.

ಸಾಮಾಜಿಕ -ಆರ್ಥಿಕ ಅಸಮಾನತೆ ಕಾರಣಕ್ಕೆ ವಂಚಿತ ಸಮುದಾಯಗಳಿಂದ ಬಂದ ವಿದ್ಯಾರ್ಥಿಗಳ ಉನ್ನತ ಶಿಕ್ಷಣವು ಯಶಸ್ವಿಯಾಗಿ ಸಾಗಲು ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿ ಉನ್ನತ ಮಟ್ಟದ ಬೆಂಬಲ ಕೇಂದ್ರವನ್ನು ಸ್ಥಾಪಿಸಿ ಅವರಿಗೆ ಹಣಕಾಸು ಮತ್ತು ಶೈಕ್ಷ಼ಣಿಕ ಬೆಂಬಲ ನೀಡಲಾಗುವುದೆಂದು ಹೇಳಲಾಗಿದೆ. ಆದರೆ ಈ ಬೆಂಬಲ ಕೇಂದ್ರಗಳ ನಿಯಂತ್ರಣ ವ್ಯವಸ್ಥೆ ಯಾರಿಗೆ ಸೇರಿರುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು.

ಇನ್ನು ತ್ರಿಭಾಷಾ ಸೂತ್ರದಡಿ ಧ್ವನಿ ವಿಜ್ಞಾನ ಮತ್ತು ಉಚ್ಛಾರಣಾ ವಿಧಾನಗಳನ್ನ ಬರ ಮಾಡಿಕೊಳ್ಳಲು ಸಂಸ್ಕೃತವನ್ನು ಒಂದು ಭಾಷೆಯನ್ನಾಗಿ ಪರಿಗಣಿಸಿರುವುದು ನಿಜಕ್ಕೂ ಭಾಷೆಯೊಂದರ ಬಲವಂತದ ಹೇರಿಕೆಯಾಗಿದೆ. ಕಾರಣ ಧ್ವನಿ ವಿಜ್ಞಾನ ಮತ್ತು ಉಚ್ಛಾರಣಾ ವಿಧಾನಗಳು ಎಲ್ಲಾ ಭಾಷೆಯಲ್ಲೂ ಇದ್ದು ಒಂದು ರೀತಿಯಲ್ಲಿ ಮಾತೃಭಾಷೆಯನ್ನು ಕಡೆಗಣಿಸುವುದು ಮತ್ತು ದ್ರಾವಿಡ ಭಾಷೆಯ ಅಸ್ತಿತ್ವಕ್ಕೆ ಪೆಟ್ಟು ಕೊಡುವ ಮನುವಾದದ ತಂತ್ರವು ಇಲ್ಲಿ ಅಡಗಿದೆ.

ಒಟ್ಟಾರೆಯಾಗಿ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ – 2020 ನಿಜಕ್ಕೂ ಪ್ರಜಾಪ್ರಭುತ್ವದ ಅಡಿಯಲ್ಲಿರುವ ಶಿಕ್ಷಣ ವ್ಯವಸ್ಥೆವನ್ನು ದುರ್ಬಲಗೊಳಿಸುವ ಮತ್ತು ಮೌಢ್ಯ ಮತ್ತು ಕೋಮುವಾದದ ಬೀಜಗಳನ್ನು ಶಿಕ್ಷಣದ ವ್ಯವಸ್ಥೆಯ ಮೂಲಕ ಭವಿಷ್ಯದ ಮಕ್ಕಳಲ್ಲಿ ಗಟ್ಟಿಗೊಳಿಸಲು ಹೊರಟಿರುವ ಈ ಕೋಮುವಾದಿ ಸರ್ಕಾರದ ಹುನ್ನಾರವಾಗಿದೆ ಎಂದು ನಾವು ಹೇಳಬಹುದು.

ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಷ್ಟ್ರೀಯ ಶಿಕ್ಷಣ ನೀತಿ -2020 ರಲ್ಲಿ ಸಂವಿಧಾನಾತ್ಮಕ ಮತ್ತು ಬಹುತ್ವದ ಮೌಲ್ಯಗಳಿಗೆ ವಿರುದ್ಧವಾಗಿರುವ ಎಲ್ಲಾ ಅಂಶಗಳನ್ನು ತೆಗೆದುಹಾಕಬೇಕೆಂದು ಎಚ್‌.ಸಿ.ಮಹದೇವಪ್ಪ ಒತ್ತಾಯಿಸಿದ್ದಾರೆ.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...