ಬೆಂಗಳೂರು: ಗ್ರಾಮ ಪಂಚಾಯಿತಿ ನೌಕರರ ಮುಂಬಡ್ತಿಗೆ ತಡೆಯಾಗಿದ್ದ ಆದೇಶವನ್ನು ಸರ್ಕಾರ ರದ್ದು ಮಾಡಿ, ಆರ್ಥಿಕ ಇಲಾಖೆ ಟಿಪ್ಪಣಿಯಂತೆ ಮುಂಬಡ್ತಿಗೆ ಸಹಮತಿಸಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘ ಆರ್ಡಿಪಿಆರ್ ರಾಜ್ಯ ಸಮಿತಿ ರಾಜ್ಯಾಧ್ಯಕ್ಷ ಡಾ. ದೇವಿಪ್ರಸಾದ್ ಬೊಲ್ಮ ತಿಳಿಸಿದ್ದಾರೆ.
ಕಳೆದ 2020ರ ಜುಲೈ 6ರ ನಂತರ ಗ್ರಾಮ ಪಂಚಾಯಿತಿಗಳ ಬಿಲ್ ಕಲೆಕ್ಟರ್ / ಗುಮಾಸ್ತ / ಬೆರಳಚ್ಚುಗಾರರ ( ಹುದ್ದೆ ಪದನಾಮ ಬದಲಾವಣೆಯಾಗಿರುವ ಕ್ಲರ್ಕ್ ಕಮ್ ಡಾಟಾ ಎಂಟ್ರಿ ಆಪರೇಟರ್ ) ಹುದ್ದೆಯಿಂದ ಗ್ರೇಡ್ -2 ಗ್ರಾಮ ಪಂಚಾಯಿತಿ ಕಾರ್ಯದರ್ಶಿ / ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಆಯ್ಕೆ ಮೂಲಕ ನೇರ ನೇಮಕಾತಿ ಮಾಡಬಾರದೆಂದು ಸರ್ಕಾರ ಜುಲೈ 6- 2020 ರಂತೆ ತಿಳಿಸಲಾಗಿತ್ತು.
ಆದರೆ, ಪ್ರಸ್ತುತ ಆರ್ಥಿಕ ಇಲಾಖೆಯು ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರೇಡ್-2 ಗ್ರಾಮ ಪಂಚಾಯಿತಿ ಕಾರ್ಯದರ್ಶಿ / ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ಅವಶ್ಯಕತೆಗೆ ಅನುಗುಣವಾಗಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಂದ ಆಯ್ಕೆ ಮೂಲಕ ನಿಯಮಾನುಸಾರ ತುಂಬಲು 06-07-2020ರಂದು ಹೊರಡಿಸಿದ್ದ ಸುತ್ತೋಲೆಯಿಂದ ವಿನಾಯತಿ ನೀಡಿದೆ.
ಹೀಗಾಗಿ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಗ್ರೇಡ್-2 ಗ್ರಾಪಂ ಕಾರ್ಯದರ್ಶಿ / ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಬಿಲ್ ಕಲೆಕ್ಟರ್ / ಗುಮಾಸ್ತ / ಕ್ಲರ್ಕ್ ಕಮ್ ಡಾಟಾ ಎಂಟ್ರಿ ಆಪರೇಟರ್ ಹುದ್ದೆಯಿಂದ ಆಯ್ಕೆ ಮೂಲಕ ನೇರ ನೇಮಕಾತಿ ಮಾಡಲು ಅನುಮತಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ (ಜಿ. ಪಂ.) ಬಿ.ನವೀನ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್. ಕುಲಾಲ್ ಅವರು ತಡೆಯಾಗಿದ್ದ ಆದೇಶ ರದ್ದು ಪಡಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದರು.
ಇನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಇದ್ದ ಮುಂಬಡ್ತಿಗೆ ತಡೆಯನ್ನು ನಿವಾರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಉಮಾ ಮಹಾದೇವನ್ ಹಾಗೂ ಇತರ ಎಲ್ಲಾ ಹಿರಿಯ ಅಧಿಕಾರಿಗಳಿಗೆ ಸಂಘದ ರಾಜ್ಯ ಸಮಿತಿ ಎಲ್ಲ ನೌಕರರು ಪರವಾಗಿ ಧನ್ಯವಾದ ಸಮರ್ಪಿಸುತ್ತಿದೆ. ಅದೇ ರೀತಿ ಗ್ರಾಮ ಪಂಚಾಯಿತಿ ನೌಕರರ ಹಲವು ವರ್ಷಗಳ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೀರಾ ಎಂಬ ಭರವಸೆಯನ್ನು ನಾವು ಹೊಂದಿರುತ್ತೇವೆ ಎಂದು ಡಾ. ದೇವಿಪ್ರಸಾದ್ ಬೊಲ್ಮ ತಿಳಿಸಿದ್ದಾರೆ.