ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಬಿಸಿ ಬಿಸಿ ಚರ್ಚೆ ಆರಂಭದ ನಡುವೆ ಗಣಿ ಸಚಿವ ಮುರುಗೇಶ್ ನಿರಾಣಿ ದಿಢೀರ್ ದೆಹಲಿಗೆ ತೆರಳುತ್ತಿದ್ದಾರೆ. ಹಿನ್ನೆಲೆಯಲ್ಲಿ ನಿರಾಣಿ ದೆಹಲಿ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ವರಿಷ್ಠರಿಂದ ಬುಲಾವ್ ಬಂದ ಹಿನ್ನೆಯಲ್ಲಿ ಅವರು ಇಂದು (ಮಂಗಳವಾರ) ಬೆಳಗ್ಗೆ 11 ಗಂಟೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಲಿದ್ದು ಕೇಂದ್ರದ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಸಿಎಂ ಸ್ಥಾನ ಬದಲಾವಣೆಯಾದರೆ ಮುರುಗೇಶ್ ನಿರಾಣಿಗೂ ಅವಕಾಶ ನೀಡಬಹುದು ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಈ ಹಿಂದಿನಿಂದಲೂ ಹೇಳಿಕೆ ನೀಡುತ್ತಿದ್ದಾರೆ. ಈ ಎಲ್ಲ ಬೆಳವಣಿಗಳನ್ನು ಗಮನಿಸಿದರೆ ನಿರಾಣಿ ದೆಹಲಿ ಭೇಟಿ ಮಹತ್ವ ಪಡೆದುಕೊಂಡಂತೆ ಕಾಣುತ್ತಿದೆ.
ದಿಢೀರ್ ದೆಹಲಿ ಭೇಟಿ ಹಿನ್ನೆಲೆಯಲ್ಲಿ ಬಳ್ಳಾರಿ ಮತ್ತು ಕಲಬುರಗಿ ಜಿಲ್ಲೆಗಳ ಪ್ರವಾಸವನ್ನು ಮುರುಗೇಶ್ ನಿರಾಣಿ ರದ್ದುಗೊಳಿಸಿದ್ದಾರೆ. ಸೋಮವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ ಅವರು ಮಂಗಳವಾರ ಬೆಳಗ್ಗೆ 11 ಗಂಟೆಗೆ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಕೆಲವು ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಇಂದೇ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜಕೀಯ ವಿದ್ಯಮಾನ ಚರ್ಚೆ ಸಾಧ್ಯತೆ
ಮುರುಗೇಶ್ ನಿರಾಣಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಆಪ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ರಾಜಕೀಯ ವಿದ್ಯಮಾನಗಳ ಕುರಿತಾಗಿ ಚರ್ಚೆ ನಡೆಯುವ ಸಾಧ್ಯತೆಗಳು ಇವೆ. ಇತ್ತೀಚೆಗಷ್ಟೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿ ಮೂರು ದಿನಗಳ ಕಾಲ ಸಭೆ ನಡೆಸಿದ್ದರು. ನಾಯಕತ್ವಕ್ಕೆ ಸಂಬಂಧಿಸಿದಂತೆ ಯಾರೂ ಕೂಡಾ ಯಾವುದೇ ರೀತಿಯ ಬಹಿರಂಗ ಹೇಳಿಕೆ ನೀಡದಂತೆ ತಾಕೀತು ಮಾಡಿದ್ದರು. ಅಲ್ಲದೆ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ಹೀಗಿದ್ದರೂ ನಾಯಕತ್ವ ಬದಲಾವಣೆ ಕುರಿತಾಗಿ ಸಚಿವರಾದ ಸಿ.ಪಿ. ಯೋಗೀಶ್ವರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿರಂತರ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿಎಂ ಬದಲಾವಣೆ ಆಗದೆ ಇದ್ದರೆ ಬಿಜೆಪಿಗೆ ಉಳಿಗಾಲವಿಲ್ಲ ಎಂದು ಯತ್ನಾಳ್ ಮತ್ತೆ ಗುಡುಗಿದ್ದಾರೆ. ಈ ಎಲ್ಲ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸಚಿವ ಮುರುಗೇಶ್ ನಿರಾಣಿಗೆ ವರಿಷ್ಠರಿಂದ ಬುಲಾವ್ ಬಂದಿದ್ದು ಸಹಜವಾಗಿ ಕುತೂಹಲ ಹೆಚ್ಚಿಸಿದೆ.
ಪಕ್ಷದ ಒಂದು ಮೂಲದ ಪ್ರಕಾರ ಬಿಎಸ್‌ವೈ ಅವರು ಈ ತಿಂಗಳ ಕೊನೆಯಲ್ಲಿ ಸಿಎಂ ಸ್ಥಾನ ತೆಜಿಸುವುದು ಬಹುತೇಕ ಖಚಿತವಂತೆ. ಆದರೆ, ಪಕ್ಷದೊಳಗಿನ ಕೆಲ ಗೊಂದಲಗಳ ನಿವಾರಣೆ ಆಗದೆ ಸಿಎಂ ಬದಲಾವಣೆ ಮಾಡುವುದು ಸರಿಯಲ್ಲ ಎಂಬ ಲೆಕ್ಕಚಾರದಿಂದ ವರಿಷ್ಠರು ಕಾದು ನೋಡಿ ಅಳೆದು ಸುರಿದು ಶೀಘ್ರದಲ್ಲೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.