ಬೆಂಗಳೂರು: ಆಮ್ ಆದ್ಮಿ ಪಾರ್ಟಿಯ ತತ್ವ ಸಿದ್ಧಾಂತಗಳು ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಜನಪರ ಆಡಳಿತವನ್ನು ಮೆಚ್ಚಿ, ಸ್ವಪಕ್ಷ ಬಿಜೆಪಿಯಲ್ಲಿನ ಭ್ರಷ್ಟಾಚಾರ, ಆಂತರಿಕ ಕಿತ್ತಾಟದಿಂದ ಬೇಸತ್ತು ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಎಚ್.ಡಿ.ಬಸವರಾಜು ಇಂದು ಎಎಪಿ ಸೇರಿದರು.
ಆಮ್ ಆದ್ಮಿ ಪಾರ್ಟಿಯು ಆರಂಭದ ದಿನದಿಂದಲೂ ಪ್ರಾಮಾಣಿಕತೆಯೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದೇ ಮುನ್ನಡೆಯುತ್ತಿದೆ. ಕಳಂಕರಹಿತ ಹಾಗೂ ಪಾರದರ್ಶಕ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಸಾಮಾನ್ಯ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಕಾರಣದಿಂದ ಅನೇಕರು ಎಎಪಿಯತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಇಂದು ನಡೆದ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮಲ್ಲಿ ತಿಳಿಸಿದರು.
ದೇಶಾದ್ಯಂತ ಅನೇಕ ಸಾಧಕರು, ಗಣ್ಯ ವ್ಯಕ್ತಿಗಳು ಹಾಗೂ ವಿವಿಧ ಪಕ್ಷಗಳು ಮುಖಂಡರು ನಮ್ಮ ಪಕ್ಷವನ್ನು ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಮಗೆ ಬೆಂಬಲ ವ್ಯಕ್ತವಾಗಲಿದ್ದು, ಕರ್ನಾಟಕದ ಅನೇಕ ಶಾಸಕರು, ಮಾಜಿ ಶಾಸಕರು ಎಎಪಿಯನ್ನು ಸೇರಲಿದ್ದಾರೆ ಎಂದು ಹೇಳಿದರು.
ಎಚ್.ಡಿ.ಬಸವರಾಜು ಅವರು 1994ರಲ್ಲಿ ಮತ್ತು 2004ರಲ್ಲಿ ವಿರಾಜಪೇಟೆಯ ಶಾಸಕರಾಗಿ ಉತ್ತಮ ಕೆಲಸಗಳನ್ನು ಮಾಡಿದ ಅನುಭವ ಹೊಂದಿದ್ದಾರೆ. 2005ರಿಂದ 2007ರವರೆಗೆ ಕರ್ನಾಟಕ ಸರ್ಕಾರ ಭರವಸೆಗಳ ಸಮಿತಿಯ ಅಧ್ಯಕ್ಷರಾಗಿ, 2003ರಿಂದ 2005ರ ತನಕ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆರ್ಥಿಕ ಹಾಗೂ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ, 2005ರಿಂದ 2007ರವರೆಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಕಾವಲು ಹಾಗೂ ನಿರ್ವಹಣೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.
ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಕರ್ನಾಟಕ ಅಹಿಂದ ಪರಿಷತ್‌ನ ಅಧ್ಯಕ್ಷರಾಗಿ ಎಚ್.ಡಿ.ಬಸವರಾಜು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಸ್ತ ಅಹಿಂದ ವರ್ಗದ, ವಿಶೇಷವಾಗಿ ಪರಿಶಿಷ್ಟ ಪಂಗಡದ ಆಶಾಕಿರಣವಾಗಿದ್ದಾರೆ. ದಲಿತರು, ಶೋಷಿತರು, ಬಡವರು, ನೊಂದವರ ಸಹಾಯಕ್ಕಾಗಿ ಜೀವನವನ್ನು ಮುಡಿಪಾಗಿಟ್ಟಿರುವ ಇಂತಹ ಅನುಭವಿ ಹಾಗೂ ಪ್ರಾಮಾಣಿಕ ನಾಯಕ ಎಎಪಿ ಸೇರಿರುವುದರಿಂದ ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದು ತಿಳಿಸಿದರು.