ಕಲಬುರಗಿ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಶನಿವಾರ ಜುಲೈ 10 ರಂದು ಬೆಳಿಗ್ಗೆ 10.45 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು.
ಅಂದು ಬೆಳಗ್ಗೆ 11.15 ಗಂಟೆಗೆ ಕಲಬುರಗಿ ನಗರದ ಎಂ.ಎಸ್.ಕೆ. ಮಿಲ್-ಅಫಜಲಪುರ ಮುಖ್ಯ ರಸ್ತೆಯ (ಕಣ್ಣಿ ಮಾರ್ಕೇಟ್ ಕ್ರಾಸ್) ಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನ ಅಡಿಯಲ್ಲಿ ನೂತನ ಮಾದರಿಯ ಕಾಯಿಪಲ್ಲೆ ಮಾರುಕಟ್ಟೆ ಸಂಕೀರ್ಣದ ಅಡಿಗಲ್ಲು ಸಮಾರಂಭ ಹಾಗೂ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಬೆಳಗ್ಗೆ 11.45 ಗಂಟೆಗೆ ಕಲಬುರಗಿ ಲೋಕೋಪಯೋಗಿ ಇಲಾಖೆಯ ಭವನದ ಆವರಣದಲ್ಲಿ ಶರಣಸಿರಸಗಿಯ ಮಧ್ಯದ ಮೇಲುಸೇತುವೆ ಲೋಕಾರ್ಪಣೆ, ರಾಮಮಂದಿರ ಮಧ್ಯದ ಮೇಲುಸೇತುವೆ ಲೋಕಾರ್ಪಣೆ, ಲೋಕೋಪಯೋಗಿ ಭವನ ಉದ್ಘಾಟನೆ, ಅವರಾದ (ಬಿ) ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡ ಉದ್ಘಾಟನೆ.
ಕಲಬುರಗಿಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ನೂತನ ಕಟ್ಟಡ ಉದ್ಘಾಟನೆ, ಆಳಂದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ನೂತನ ಕಟ್ಟಡ ಉದ್ಘಾಟನೆ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ನೂತನ ಕಟ್ಟಡ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಮಧ್ಯಾಹ್ನ 12.30 ಗಂಟೆಗೆ ಕಲಬುರಗಿ ನಗರದ ಡಾ.ಎಸ್. ಎಂ. ಪಂಡಿತ ರಂಗಮಂದಿರದಲ್ಲಿ ಸಹಕಾರ ಇಲಾಖೆ ಹಾಗೂ ಕಲಬುರಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತ ವತಿಯಿಂದ ಆಯೋಜಿಸಲಾದ ರೈತರಿಗೆ ಬಡ್ಡಿ ರಹಿತ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 1.15 ಗಂಟೆಗೆ ಕಲಬುರಗಿ ಜಿಲ್ಲಾ ಭಾರತೀಯ ಜನತಾ ಪಕ್ಷದ ಕಚೇರಿಗೆ ಭೇಟಿ ಮಾಡುವರು.
ಅಂದು ಮಧ್ಯಾಹ್ನ 1.45 ಗಂಟೆಗೆ ನಗರದ ಐವಾನ್ ಶಾಹಿ ಅತಿಥಿ ಗೃಹಕ್ಕೆ ತೆರಳುವರು. ಮಧ್ಯಾಹ್ನ 3 ಗಂಟೆಗೆ ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕೋವಿಡ್-19 (ಕೊರೋನಾ ವೈರಸ್) ಹಾಗೂ ಇತರೆ ಅಭಿವೃದ್ಧಿ ವಿಷಯಗಳ ಕುರಿತು ಜಿಲ್ಲಾಡಳಿತದೊಂದಿಗೆ ಪರಿಶೀಲನಾ ಸಭೆ ನಡೆಸುವರು. ಸಂಜೆ 4.15 ಗಂಟೆಗೆ ಕಲಬುರಗಿ ವಿಮಾನದ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡುವರು.