ಬೆಂಗಳೂರು: ಸಾರಿಗೆ ನೌಕರರ ವಿರುದ್ಧ ಮುಷ್ಕರದ ವೇಳೆ ನಗರದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಸಂಬಂಧ ಇಂದು ನಗರದ ಸಿಟಿ ಸಿವಿಲ್ ನ್ಯಾಯಾಲಯದ 60ನೇ ಹಾಲ್‌ನಲ್ಲಿ ನಡೆದ ಜಾಮೀನು ಅರ್ಜಿ ವಿಚಾರಣೆಯ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಜುಲೈ 13ಕ್ಕೆ ತೀರ್ಪು ಕಾಯ್ದಿರಿಸಿದ್ದಾರೆ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರ ಶೇಖರ್, ಅಧ್ಯಕ್ಷ ಚಂದ್ರಶೇಖರ್ ಮತ್ತು ಪದಾಧಿಕಾರಿಗಳ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ಶುಕ್ರವಾರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯದಲ್ಲಿ ಕೈಗೆತ್ತಿಕೊಳ್ಳಲಾಯಿತು. ಈ ವೇಳೆ ಸರ್ಕಾರಿ ಅಭಿಯೋಜಕರು ಕೋಡಿಹಳ್ಳಿ ಚಂದ್ರಶೇಖರ್ ಅವರು ಸರ್ಕಾರಿ ನೌಕರರೆ ಎಂದು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದರು.
ಅದಕ್ಕೆ ಆರೋಪಿಗಳ ಪರ ವಕಾಲತು ವಹಿಸಿರುವ ಸುಪ್ರೀಂ ಕೋರ್ಟ್ ಮತ್ತು ಕರ್ನಾಟಕ ಹೈ ಕೋರ್ಟ್ ವಕೀಲರಾದ ಎಚ್.ಬಿ.ಶಿವರಾಜು ತಮ್ಮ ವಾದದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವರು ಹೋರಾಟಗಾರರು. ಹಾಗೇಯೇ ಕೂಟದ ಅಧ್ಯಕ್ಷ ಚಂದ್ರಶೇಖರ್ ಸೇರಿ ಸಹಆರೋಪಿಗಳು ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯ ನೌಕರರಾಗಿದ್ದಾರೆ.
ಇನ್ನು ಈ ಎಲ್ಲಾ ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿರುವುದಿಲ್ಲ. ಆದ್ದರಿಂದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ದಾಖಲಿಸಿರುವ ದೂರು ಸುಳ್ಳಿನಿಂದ ಕೂಡಿರುತ್ತದೆ. ಹೀಗಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಿರುವ ಎಲ್ಲ ಆರೋಪಿಗಳಿಗೂ ಜಾಮೀನು ಮಂಜೂರು ಮಾಡಬೇಕು ಎಂದು ಸುಮಾರು ಒಂದು ಗಂಟೆ ವಾದ ಮಂಡಿಸಿದರು.
ಅಲ್ಲದೆ ಇದೇ ಜುಲೈ 16ರಂದು ಕರ್ನಾಟಕದ ಹೈ ಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಮುಂದೆ ರಿಟ್ ಅರ್ಜಿ ಸಂಖ್ಯೆ 8012/2021 ಈ ಪ್ರಕರಣವಿದೆ. ಅಲ್ಲಿಯೂ ಸಹ ನಾವೇ ವಕೀಲರಾಗಿರುವುದಿಂದ ಈ ಆರೋಪಿಗಳಿಗೆ ಜಾಮೀನು ದೊರೆತಲ್ಲಿ ಅವರು ಮುಂದೆ ಕರ್ತವ್ಯ ಮಾಡಲು ತುಂಬ ಅನುಕೂಲಕರವಾಗುತ್ತದೆ ಎಂದು ನ್ಯಾಯಾಧೀಶರ ಮುಂದೆ ವಕೀಲರು ಮನವಿ ಮಾಡಿಕೊಂಡಿದ್ದಾರೆ. ಆದರೆ, ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಜುಲೈ 13ಕ್ಕೆ ಕಾಯ್ದಿರಿಸಿದ್ದಾರೆ.
ನೌಕರರಿಂದ ಶುಲ್ಕ ಪಡೆಯದೆ ವಕಾಲತು ವಹಿಸಿರುವ ವಕೀಲ ಎಚ್.ಬಿ.ಶಿವರಾಜು
ಬೆಂಗಳೂರಿನ ವಿವಿಧ ನ್ಯಾಯಾಲಯಗಳು ಸೇರಿದಂತೆ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಸಾರಿಗೆ ನೌಕರರ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಎಲ್ಲಾ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿಸಿದ್ದಾರೆ. ಈ ಪ್ರಕರಣಗಳ ಸಂಬಂಧ ವಕೀಲರು ನೌಕರರಿಂದ ಯಾವುದೇ ಶುಲ್ಕ ಪಡೆಯದೆ ಮಾನವೀಯತೆ ಮೆರೆದಿದ್ದಾರೆ. ಇದರ ಜತೆಗೆ ರಾಜ್ಯ ಹೈ ಕೊರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣಗಳಿಗೂ ಯಾವುದೇ ಶುಲ್ಕ ಪಡೆಯದೆ ನೌಕರರಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗಿದ್ದಾರೆ.