ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಸೇರಿದ ಮೈಸೂರಿನ ಆಸ್ತಿ ಪತ್ರಗಳನ್ನು ಫೋರ್ಜರಿ ಮಾಡಿ, ದರ್ಶನ್ ಸ್ನೇಹಿತರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದ ಬ್ಯಾಂಕ್ ನಕಲಿ ಮಹಿಳಾ ಅಧಿಕಾರಿ ಸೇರಿ ಮೂವರನ್ನು ಮೈಸೂರು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ ಪೊಲೀಸರು ಅರುಣಕುಮಾರಿ, ಮಧುಕೇಶವ ಹಾಗೂ ನಂದೀಶ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ನಟ ದರ್ಶನ್ ಆಸ್ತಿ ಪತ್ರ ಮತ್ತು ಸಹಿಯನ್ನು ನಕಲು ಮಾಡಿ, ಅದರ ಆಧಾರದ ಮೇಲೆ ಬ್ಯಾಂಕಿನಲ್ಲಿ25 ಕೋಟಿ ರೂ. ಸಾಲಕ್ಕಾಗಿ ಅರ್ಜಿ ಸಲ್ಲಿಸಿರುವ ದಾಖಲಾತಿ ಸೃಷ್ಟಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಕಲಿ ಬ್ಯಾಂಕ್ ಅಧಿಕಾರಿ ಅರುಣಕುಮಾರಿ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ.
ಈ ವಿಚಾರ ತಿಳಿದ ನಟ ದರ್ಶನ್ ಭಾನುವಾರ ತಮ್ಮ ಸ್ನೇಹಿತರಾದ ದೂರುದಾರ ಹರ್ಷ ಮಲೆಂಟಾ, ನಿರ್ಮಾಪಕ ಉಮಾಪತಿ ಹಾಗೂ ಇತರರೊಂದಿಗೆ ಮೈಸೂರಿನ ಎನ್.ಆರ್.ಉಪ ವಿಭಾಗದ ಎಸಿಪಿ ಕಚೇರಿಗೆ ಖುದ್ದು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಜೂನ್.16ರಂದು ನಿರ್ಮಾಪಕ ಉಮಾಪತಿ ಅವರು ಹರ್ಷ ಮಲೆಂಟಾಗೆ ಕರೆ ಮಾಡಿ, ಕೆನರಾ ಬ್ಯಾಂಕಿನ ಮಾನ್ಯೇಜರ್ ಅರುಣಕುಮಾರಿ ನನಗೆ ಸಿಕ್ಕಿದ್ದು, ನೀನು 25 ಕೋಟಿ ರೂ. ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದೀಯಾ? ಅದರ ಭದ್ರತೆಗಾಗಿ ನಿನ್ನ ಆಸ್ತಿ ಮತ್ತು ದರ್ಶನ್ ಆಸ್ತಿ ಪತ್ರಗಳನ್ನು ನಕಲು ಮಾಡಿ ಸಲ್ಲಿಸಿದ್ದೀಯಾ ಎಂದು ಕೇಳಿದ್ದಾರೆ.
ಗಾಬರಿಯಾದ ಹರ್ಷ ಬ್ಯಾಂಕಿನ ಅಧಿಕಾರಿಗೆ ಕರೆ ಮಾಡಿ ವಿಚಾರಿಸಿದ್ದು, ಅದೇ ದಿನ ಅರುಣಕುಮಾರಿ, ಮಧುಕೇಶವ ಮತ್ತು ನಂದೀಶ ಎಂಬುವವರೊಂದಿಗೆ ಮೈಸೂರಿಗೆ ಬಂದು, ಕೆಲವು ಆಸ್ತಿಪತ್ರಗಳ ಜೆರಾಕ್ಸ್ ಪ್ರತಿಯನ್ನು ಹರ್ಷ ಮಲೆಂಟಾ ಅವರಿಗೆ ತೋರಿಸಿದ್ದಾರೆ.
ನೀವು ಗಣ್ಯವ್ಯಕ್ತಿಯೊಬ್ಬರ ಆಸ್ತಿಪತ್ರ ಫೋರ್ಜರಿ ಮಾಡಿದ್ದು, ಅದನ್ನು ಮಾಧ್ಯಮಗಳ ಮುಂದೆ ಹೇಳುವುದಾಗಿ ಬೆದರಿಸಿ 25 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟು ಹೊರಟಿದ್ದಾರೆ. ನಂತರ ಜೂನ್.17ರಂದು ಬೆಂಗಳೂರಿನಲ್ಲಿರುವ ಕೆನರಾ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಬಂದಿದ್ದ ಮಹಿಳೆ ನಕಲಿ ಬ್ಯಾಂಕ್ ಮ್ಯಾನೇಜರ್ ಎಂಬುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಹರ್ಷ ಮಲೆಂಟಾ ಜು.3ರಂದು ಮೈಸೂರಿನ ಹೆಬ್ಬಾಳ ಠಾಣೆಯಲ್ಲಿ ಅರುಣಕುಮಾರಿ, ಮಧುಕೇಶವ ಮತ್ತು ನಂದೀಶ ಎಂಬುವವರ ವಿರುದ್ಧ ದೂರು ದಾಖಲಿಸಿದ್ದಾರೆ.
ಇನ್ನು ಹೆಬ್ಬಾಳದ ರಿಂಗ್ ರೋಡ್ ಬಳಿ ಬರುವಂತೆ ಆರೋಪಿಗಳು ತಿಳಿಸಿದ್ದರು. ಈ ವೇಳೆ ಅಲ್ಲಿಗೆ ಹೋಗಾದ ಸಾಲಕ್ಕೆ ಸಲ್ಲಿಸಿದ್ದ ಅರ್ಜಿ ಪತ್ರ ಹಾಗೂ ಇತರ ಆಸ್ತಿ ಪತ್ರಗಳ ಜೆರಾಕ್ಸ್ ಪ್ರತಿಯನ್ನು ನೀಡಿದರು. ಈ ವೇಳೆ ನಾನು ಆಸ್ತಿ ಪತ್ರಗಳ ಫೋರ್ಜರಿ ಮಾಡಿರುವುದಾಗಿ ಆರೋಪ ಮಾಡಿದರು. ಬಳಿಕ ಮಾಧ್ಯಮಗಳು ಹಾಗೂ ಪೊಲೀಸರಿಗೆ ದೂರು ನೀಡಬಾರದು ಎಂದಾದರೆ 25 ಲಕ್ಷ ರೂ. ನೀಡಬೇಕೆಂದು ಬೆದರಿಕೆ ಹಾಕಿದ್ದರು ಎಂದು ಹರ್ಷ ದೂರಿನಲ್ಲಿ ವಿವರಿಸಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ದರ್ಶನ್ ಅವರು ನನ್ನ ಆಸ್ತಿ ಪತ್ರಗಳು ಫೋರ್ಜರಿ ಆಗಿರುವ ವಿಚಾರ 1 ತಿಂಗಳ ಹಿಂದೆ ತಿಳಿದಿತ್ತು. ಬಂಧಿತ ಆರೋಪಿ ಬಾಯಿ ಬಿಟ್ಟರೆ ಎಲ್ಲವೂ ಗೊತ್ತಾಗುತ್ತದೆ. ಪೊಲೀಸರು ಠಾಣೆಗೆ ಕರೆದಿದ್ದಕ್ಕೆ ಹೋಗಿದ್ದೆ. ಸ್ನೇಹಿತರಿಂದಲೇ ಮೋಸವಾಗಿದೆ ಎಂದು ತಿಳಿದಿದ್ದೇ ಆದರೆ, ಯಾರನ್ನೂ ಬಿಡುವುದಿಲ್ಲ. ಇದಕ್ಕೆ ರೆಕ್ಕೆಪುಕ್ಕ ಬೆಳೆಸೋದು ಬೇಡ. ಯಾರೂ ಎಂದು ತಿಳಿಯಲಿ ರೆಕ್ಕೆಪುಕ್ಕವಲ್ಲ, ತಲೆಯನ್ನೇ ಕಡಿಯೋನು ಎಂದು ನಿಮಗೆಲ್ಲರಿಗೂ ಗೊತ್ತು ಎಂದು ಗುಡಿಗಿದರು.
ಡಿಸಿಪಿ ಪ್ರದೀಪ್ ಮಾತನಾಡಿ, ಪ್ರಕರಣ ಸಂಬಂಧ ಈ ವರೆಗೂ ಯಾರನ್ನೂ ವಶಕ್ಕೆ ಪಡೆದಿಲ್ಲ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದಷ್ಟೇ ತಿಳಿಸಿದರು.