ಜೇವರ್ಗಿ: ಬಕ್ರೀದ್ ಹಿನ್ನೆಲೆ: ಪ್ರಾಣಿ ವಧೆ ತಡೆಗೆ ಹಿಂದೂ ಜಾಗ್ರತಿ ಸೇನೆಯಿಂದ ತಹಸೀಲ್ದಾರ್‌ಗೆ ಮನವಿ
ಜೇವರ್ಗಿ: ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ಜೇವರ್ಗಿ ಪಟ್ಟಣ ಮತ್ತು ಹಳ್ಳಿಗಳಲ್ಲಿ ನಡೆಯುವ ಗೋ ಹತ್ಯೆ ಮತ್ತು ಪ್ರಾಣಿ ವಧೆ ತಡೆಗಟ್ಟುವಂತೆ ಜೇವರ್ಗಿ ಹಿಂದೂ ಜಾಗ್ರತಿ ಸೇನೆ ವತಿಯಿಂದ ಮಿನಿ ವಿಧಾನಸೌಧದಲ್ಲಿರುವ ತಹಸೀಲ್ ಕಾರ್ಯಾಲಯದಲ್ಲಿ ತಹಸೀಲ್ದಾರ್ ವಿನಯಕುಮಾರ ಪಾಟೀಲ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಸೇನೆ ಅಧ್ಯಕ್ಷ ವಿಶ್ವನಾಥ ಪಾಟೀಲ, ಮುಂಬರುವ ಬಕ್ರೀದ್ ಹಬ್ಬದಂದು ನಗರ ಮತ್ತು ತಾಲೂಕಿನ ಹಳ್ಳಿಗಳಲ್ಲಿ ನೂರಾರು ಗೋವುಗಳು ಮತ್ತು ಇತರೆ ಪ್ರಾಣಿಗಳ ವಧೆ ನಡೆಯಲಿದೆ. ಹೀಗಾಗಿ ಅದಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಲಾಗಿದೆ ಎಂದರು.
ಗೋ ಹತ್ಯೆ ಮತ್ತು ಪ್ರಾಣಿ ಬಲಿ ಮಾಡುವುದು ಕಾನೂನಿನಡಿ ಅಪರಾಧವಾಗಿದೆ. ಆದರೂ ಪ್ರಾಣಿಗಳ ವಧೆ ನಡೆಯುತ್ತಿರುತ್ತದೆ. ಆದಕಾರಣ ತಾಲೂಕು ಆಡಳಿತ ಹೆದ್ದಾರಿಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಬಿಗಿ ಬಂದೋಬಸ್ತ್ ಮಾಡಿ ಪ್ರಾಣಿಗಳ ಬಲಿ ನಿಷೇಧಿಸಿ, ಅಂತಹ ಪ್ರಾಣಿಗಳನ್ನು ರಕ್ಷಿಸಬೇಕೆಂದು ಮನವಿ ಮಾಡಿದ್ದೇವೆ ಎಂದರು.
ನಗರ ಘಟಕದ ಅಧ್ಯಕ್ಷ ಶರಣು ಕೋಬಾಳಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.