ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳ ಕಿರುಕುಳ ಖಂಡಿಸಿ ಎಎಪಿಯಿಂದ ಪರೀಕ್ಷಾ ಮಂಡಳಿ ಕಚೇರಿಗೆ ಮುತ್ತಿಗೆ
ಶುಲ್ಕ ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ನೀಡದಿರುವುದಕ್ಕೆ ಖಂಡನೆ l ಆನ್‌ಲೈನ್ ಮೂಲಕ ನೇರವಾಗಿ ವಿದ್ಯಾರ್ಥಿಗಳಿಗೇ ಪ್ರವೇಶಪತ್ರ ವಿತರಿಸಲು ಆಗ್ರಹ
ಬೆಂಗಳೂರು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ನೀಡದೇ ಸತಾಯಿಸುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಎಪಿಯ ನೂರಾರು ಕಾರ್ಯಕರ್ತರು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ಮಲ್ಲೇಶ್ವರಂ ವೃತ್ತದ ಸಮೀಪವಿರುವ ಮಂಡಳಿಯ ಕಚೇರಿಯ ಎದುರು ಜಮಾಯಿಸಿದ ಕಾರ್ಯಕರ್ತರು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರ ವಿರುದ್ಧ ಘೋಷಣೆ ಕೂಗಿದರು. ಅಸಮರ್ಥ ಶಿಕ್ಷಣ ಸಚಿವ, ಬಹು ಅಂಗಾಂಗ ವೈಕಲ್ಯದಿಂದ ಬಳಲುತ್ತಿರುವ ಸರ್ಕಾರ ಎಂದು ಬರೆದಿದ್ದ ಫಲಕ ಹಿಡಿದು ಪ್ರತಿಭಟನೆ ನಡೆಸಿದರು.
ಖಾಸಗಿ ಶಾಲೆಗಳ ವಿರುದ್ಧ ಗೂಂಡಾ ಕಾಯ್ದೆಯಿಡಿ ಕ್ರಮ ಕೈಗೊಳ್ಳಬೇಕು ಹಾಗೂ ಆನ್‌ಲೈನ್ ಮೂಲಕ ಪ್ರವೇಶಪತ್ರ ಕೂಡಲೇ ಪ್ರವೇಶಪತ್ರ ವಿತರಿಸಬೇಕು ಎಂದು ಆಗ್ರಹಿಸಿ ಹಕ್ಕೊತ್ತಾಯ ಪತ್ರವನ್ನು ಮಂಡಳಿಯ ನಿರ್ದೇಶಕರಿಗೆ ನೀಡಿದರು.
ಈ ವೇಳೆ ಮಾತನಾಡಿದ ಬೆಂಗಳೂರು ನಗರದ ಎಎಪಿ ಅಧ್ಯಕ್ಷ ಮೋಹನ್ ದಾಸರಿಯವರು, “ಕೋವಿಡ್ ಹಾಗೂ ಲಾಕ್‌ಡೌನ್‌ನಿಂದಾಗಿ ಪೋಷಕರು ಆದಾಯವಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವುದು ಖಾಸಗಿ ಶಾಲೆಗಳಿಗೆ ಕಾಣುತ್ತಿಲ್ಲ.
70% ಮಾತ್ರ ಶುಲ್ಕವನ್ನು ಮಾತ್ರ ಪಡೆಯಬೇಕೆಂಬ ನಿಯಮವನ್ನು ಅವು ಗಾಳಿಗೆ ತೂರಿವೆ. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಖಾಸಗಿ ಶಾಲೆಗಳಿಂದ ಸುರೇಶ್ ಕುಮಾರ್‌ರವರಿಗೆ ಎಷ್ಟು ಕಮಿಷನ್ ಬರುತ್ತಿದೆ?
ವಿದ್ಯಾರ್ಥಿಗಳು ಹಾಗೂ ಪೋಷಕರ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ಸುರೇಶ್ ಕುಮಾರ್‌ರವರು ಶಿಕ್ಷಣ ಸಚಿವರಾಗಿರುವುದು ರಾಜ್ಯದ ದುರಾದೃಷ್ಟ. ಅಸಮರ್ಥರಾಗಿರುವ ಅವರು ತಕ್ಷಣವೇ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.
ಎಎಪಿಯ ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ. ಸದಂರವರು, “ವಿದ್ಯಾರ್ಥಿಗಳು ಹಾಗೂ ಪೋಷಕರ ಬದುಕಿನ ಜೊತೆ ಖಾಸಗಿ ಶಾಲೆಗಳು ಚೆಲ್ಲಾಟ ಆಡುತ್ತಿವೆ. ದುಬಾರಿ ಶುಲ್ಕ ಕಟ್ಟಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ನೀಡದೇ ಸತಾಯಿಸುತ್ತಿವೆ.
ವಿದ್ಯಾರ್ಥಿಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿಯಿದ್ದರೆ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ನೇರವಾಗಿ ಪ್ರವೇಶಪತ್ರ ವಿತರಿಸಬೇಕು. ಶುಲ್ಕದಂಧೆಯಲ್ಲಿ ತೊಡಗಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳುವ ಬದಲು ಜಾಣ ಕುರುಡು ಪ್ರದರ್ಶಿಸುತ್ತಿರುವ ಸರ್ಕಾರಕ್ಕೆ ನಾಚಿಕೆಯಾಗಬೇಕು. ಈ ಕಾರಣಕ್ಕೆ ವಿದ್ಯಾರ್ಥಿಗಳು ಅಥವಾ ಪೋಷಕರು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಶಿಕ್ಷಣ ಸಚಿವರೇ ನೇರ ಹೊಣೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಎಪಿ ಮುಖಂಡರಾದ ಬಿ.ಟಿ.ನಾಗಣ್ಣ, ಸುಮನ್ ಪ್ರಶಾಂತ್, ಉಷಾ ಮೋಹನ್, ಪುಟ್ಟಣ್ಣ ಗೌಡ, ಡಾ. ಸುಹಾಸಿನಿ, ಡಾ. ಸತೀಶ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.